"ದೇಶ ನಿಮ್ಮನ್ನು ಮತ್ತೆ ಎಂದೂ ಗೌರವದಿಂದ ಕಾಣುವುದಿಲ್ಲ": ಬಿಜೆಪಿ ಸೋತಿದ್ದಕ್ಕೆ ಅಯೋಧ್ಯೆಯ ಮತದಾರರ ವಿರುದ್ಧ ವಾಗ್ದಾಳಿ ನಡೆಸಿದ ʼರಾಮಾಯಣʼದ ನಟ
ಸುನೀಲ್ ಲಹ್ರಿ | PC : NDTV
ಹೊಸದಿಲ್ಲಿ: ಜನಪ್ರಿಯ “ರಾಮಾಯಣ” ಟಿವಿ ಧಾರಾವಾಹಿಯಲ್ಲಿ ಲಕ್ಷ್ಮಣ ಪಾತ್ರಧಾರಿಯಾಗಿ ಖ್ಯಾತಿ ಪಡೆದಿದ್ದ ಸುನೀಲ್ ಲಹ್ರಿ ಅವರು ಅಯೋಧ್ಯೆಯಲ್ಲಿ ಬಿಜೆಪಿಯ ಸೋಲಿನ ಕುರಿತು ತಮ್ಮ ನಿರಾಸೆ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆ ಇರುವ ಫೈಝಾಬಾದ್ ಕ್ಷೇತ್ರದಲ್ಲಿ ಬಿಜೆಪಿಯ ಲಲ್ಲು ಸಿಂಗ್ ಅವರನ್ನು ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ ಸೋಲಿಸಿದ್ದರು.
ಈ ಹಿನ್ನೆಲೆಯಲ್ಲಿ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿರುವ ಅವರು ಬಾಹುಬಲಿಯಲ್ಲಿ ಕಟ್ಟಪ್ಪ ಕೊಲ್ಲುವ ಬಾಹುಬಲಿ ಸಿನಿಮಾದ ಚಿತ್ರ ಪೋಸ್ಟ್ ಮಾಡಿದ್ದಾರೆ, ಅದರಲ್ಲಿ ಕಟ್ಟಪ್ಪನ ಮೇಲೆ ಅಯೋಧ್ಯೆ ಎಂದು ಬರೆಯಲಾಗಿದೆ. ಅದರ ಜೊತೆಗೆ ಹಿಂದಿಯಲ್ಲಿ ಪೋಸ್ಟ್ ಮಾಡಿರುವ ಅವರು “ಸೀತಾ ಮಾತೆ ವನವಾಸದಿಂದ ಮರಳಿದ ಬಳಿಕ ಆಕೆಯನ್ನು ಶಂಕಿಸಿದವರು ಇದೇ ಅಯೋಧ್ಯೆಯ ನಾಗರಿಕರೆಂಬುದನ್ನು ನಾವು ಮರೆತಿದ್ದೇವೆ. ದೇವರನ್ನೇ ನಿರಾಕರಿಸುವ ವ್ಯಕ್ತಿಗೆ ಏನೆಂದು ಕರೆಯಲಾಗುತ್ತದೆ? ಸ್ವಾರ್ಥಿ. ಅಯೋಧ್ಯೆಯ ನಾಗರಿಕರು ಯಾವತ್ತೂ ತಮ್ಮ ರಾಜನಿಗೆ ದ್ರೋಹವೆಸಗಿದ್ದಕ್ಕಾಗಿ ಇತಿಹಾಸ ಸಾಕ್ಷಿಯಾಗಿದೆ. ನಾಚಿಕೆಗೇಡು,” ಎಂದು ಬರೆದಿದ್ದಾರೆ.
ಇನ್ನೊಂದು ಪೋಸ್ಟ್ನಲ್ಲಿ “ಅಯೋಧ್ಯೆಯ ಪ್ರೀತಿಯ ನಾಗರಿಕರೇ ನಾವು ನಿಮ್ಮ ಮಹಾನತೆಯನ್ನು ಗೌರವಿಸುತ್ತೇವೆ. ಸೀತಾ ಮಾತೆಯನ್ನೂ ಬಿಟ್ಟುಬಿಡದವರು ನೀವು. ಶ್ರೀ ರಾಮ ದೇವರು ಆ ಸಣ್ಣ ಟೆಂಟಿನಿಂದ ಹೊರಬಂದು ಸುಂದರ ಮಂದಿರದಲ್ಲಿ ಪ್ರತಿಷ್ಠಾಪಿಸಲು ಕಾರಣರಾದ ವ್ಯಕ್ತಿಗೆ ನೀವು ದ್ರೋಹವೆಸಗಿದ್ದು ನಮಗೆ ಆಘಾತ ತಂದಿಲ್ಲ. ಇಡೀ ದೇಶ ನಿಮ್ಮನ್ನು ಮತ್ತೆ ಗೌರವದಿಂದ ಎಂದೂ ಕಾಣುವುದಿಲ್ಲ,” ಎಂದು ಸುನೀಲ್ ಲಹ್ರಿ ಬರೆದಿದ್ದಾರೆ.