ದೀರ್ಘಕಾಲದ ಅನಾರೋಗ್ಯ, ಆರ್ಥಿಕ ಬಿಕ್ಕಟ್ಟು ; ಇಬ್ಬರು ಮಕ್ಕಳನ್ನು ಕೊಂದು ಸಾವಿಗೆ ಶರಣಾದ ದಂಪತಿ

ಸಾಂದರ್ಭಿಕ ಚಿತ್ರ
ಹೈದರಾಬಾದ್: ದೀರ್ಘ ಕಾಲದ ಅನಾರೋಗ್ಯ ಹಾಗೂ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಹತಾಶರಾಗಿ ಮಾಜಿ ಉಪನ್ಯಾಸಕ ಚಂದ್ರಶೇಖರ ರೆಡ್ಡಿ ಎಂಬವರು ತನ್ನ ಇಬ್ಬರು ಮಕ್ಕಳನ್ನು ಕೊಂದು ಪತ್ನಿಯೊಂದಿಗೆ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ ಎಂದು ಉಸ್ಮಾನಿಯ ವಿಶ್ವವಿದ್ಯಾನಿಲಯದ ಪೊಲೀಸರು ತಿಳಿಸಿದ್ದಾರೆ.
ಹಬ್ಸಿಗುಡಾದಲ್ಲಿರುವ ಚಂದ್ರಶೇಖರ ರೆಡ್ಡಿ ಮನೆಯಿಂದ ಅವರು ಬರೆದಿದ್ದಾರೆ ಎನ್ನಲಾದ ಸುಸೈಡ್ ನೋಟ್ ಅನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಸುಸೈಡ್ ನೋಟ್ನಲ್ಲಿ ಚಂದ್ರಶೇಖರ ರೆಡ್ಡಿ, ತನ್ನ ಹಾಗೂ ತನ್ನ ಕುಟುಂಬದ ಸದಸ್ಯರ ಸಾವಿಗೆ ಯಾರೊಬ್ಬರೂ ಜವಾಬ್ದಾರರಲ್ಲ ಎಂದು ಹೇಳಿದ್ದಾರೆ. ವೃತ್ತಿ ಜೀವನದಲ್ಲಿ ಉಂಟಾದ ವಿಫಲತೆ, ದೀರ್ಘಕಾಲದ ಅನಾರೋಗ್ಯ ಹಾಗೂ ಸಾಲದ ಕುರಿತಂತೆ ತಾನು ಹತಾಶನಾಗಿದ್ದೆ ಎಂದು ಅವರು ತಿಳಿಸಿದ್ದಾರೆ
ಚಂದ್ರಶೇಖರ ರೆಡ್ಡಿ (40) ಹಬ್ಸಿಗುಡಾದಲ್ಲಿರುವ ಬಾಡಿಗೆ ಮನೆಯಲ್ಲಿ ತನ್ನ ಪತ್ನಿ ಕವಿತಾ (35) ಹಾಗೂ ಪುತ್ರಿ ಶೃತಾ ರೆಡ್ಡಿ (15), ಪುತ್ರ ವಿಶ್ವ ರೆಡ್ಡಿ (10)ಅವರೊಂದಿಗೆ ವಾಸಿಸುತ್ತಿದ್ದರು.
ದಂಪತಿ ಸೋಮವಾರ ಸಂಜೆ ತಮ್ಮ ಇಬ್ಬರು ಮಕ್ಕಳನ್ನು ಕೊಂದು ಅನಂತರ ಸಾವಿಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಮಕ್ಕಳ ಮೃತದೇಹ ಕೊಠಡಿಯ ಬೆಡ್ ಮೇಲೆ ಬಿದ್ದುಕೊಂಡಿದ್ದರೆ, ದಂಪತಿ ನೇಣು ಹಾಕಿಕೊಂಡಿರುವುದು ಕಂಡು ಬಂದಿದೆ.
ಚಂದ್ರಶೇಖರ ರೆಡ್ಡಿ ಅವರು ಕಾಲೇಜೊಂದರಲ್ಲಿ ಕಿರಿಯ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, 6 ತಿಂಗಳ ಹಿಂದೆ ಅವರು ಆ ಹುದ್ದೆಗೆ ರಾಜೀನಾಮೆ ನೀಡಿದ್ದರು.
ದಂಪತಿ ತಮ್ಮ ಮಕ್ಕಳನ್ನು ಕುತ್ತಿಗೆ ಹಿಸುಕಿ ಕೊಂದು, ಅನಂತರ ತಾವು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.