ಉತ್ತರ ಪ್ರದೇಶದ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ತಲೆ ಮರೆಸಿಕೊಂಡಿದ್ದಾರೆ ಎಂದು ಘೋಷಿಸಿದ ನ್ಯಾಯಾಲಯ
ಸ್ವಾಮಿ ಪ್ರಸಾದ್ ಮೌರ್ಯ (Photo: PTI)
ಲಕ್ನೊ: ವ್ಯಕ್ತಿಯೊಬ್ಬರಿಗೆ ಕಿರುಕುಳ ನೀಡಿ, ಅವರಿಗೆ ಬೆದರಿಕೆ ಒಡ್ಡಿದ ಆರೋಪದ ಪ್ರಕರಣದಲ್ಲಿ ಉತ್ತರ ಪ್ರದೇಶದ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಹಾಗೂ ಅವರ ಪುತ್ರಿ ಮತ್ತು ಮಾಜಿ ಸಂಸದೆ ಸಂಘಮಿತ್ರ ಮೌರ್ಯ ತಲೆ ಮರೆಸಿಕೊಂಡಿದ್ದಾರೆ ಎಂದು ವಿಶೇಷ ಶಾಸಕ-ಸಂಸದರ ನ್ಯಾಯಾಲಯವೊಂದು ಘೋಷಿಸಿದೆ.
ಆಗಸ್ಟ್ 27ರಂದು ಪ್ರಕರಣದ ಮರು ವಿಚಾರಣೆಯನ್ನು ನಿಗದಿಗೊಳಿಸಲಾಗಿದೆ.
ಜುಲೈ 5ರಂದು ಸ್ಥಳೀಯ ಶಾಸಕ-ಸಂಸದರ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಅಲೋಕ್ ವರ್ಮ ಈ ಆದೇಶವನ್ನು ಹೊರಡಿಸಿದ್ದರೂ, ಶುಕ್ರವಾರದಂದು ಈ ಸಂಗತಿಯನ್ನು ಸಾರ್ವಜನಿಕಗೊಳಿಸಲಾಗಿದೆ. ಸಂಘಮಿತ್ರರ ಪತಿ ಎಂದು ಹೇಳಲಾಗಿರುವ ದೀಪಕ್ ಕುಮಾರ್ ಸ್ವರ್ಣಕರ್ ಎಂಬ ವ್ಯಕ್ತಿಗೆ ಕಿರುಕುಳ ನೀಡಿದ ಆರೋಪದ ಪ್ರಕರಣದಲ್ಲಿ ಸ್ವಾಮಿ ಪ್ರಸಾದ್ ಮೌರ್ಯ, ಬಿಜೆಪಿಯ ಮಾಜಿ ಸಂಸದೆ ಸಂಘಮಿತ್ರ ಮೌರ್ಯ ಹಾಗೂ ಇನ್ನಿತರ ಮೂವರು ತಲೆ ಮರೆಸಿಕೊಂಡಿದ್ದಾರೆ ಎಂದು ಅವರು ಘೋಷಿಸಿದ್ದಾರೆ.
ಪದೇ ಪದೇ ಸಮನ್ಸ್ ಹಾಗೂ ವಾರೆಂಟ್ಗಳನ್ನು ಜಾರಿಗೊಳಿಸಿದರೂ, ಆರೋಪಿಗಳು ನ್ಯಾಯಲಯದೆದುರು ಹಾಜರಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಇದಕ್ಕೂ ಮುನ್ನ, ಸ್ವಾಮಿ ಪ್ರಸಾದ್ ಮೌರ್ಯ, ಸಂಘಮಿತ್ರ ಮೌರ್ಯ ಸೇರಿದಂತೆ ಐವರು ಆರೋಪಿಗಳು ನನ್ನ ಮೇಲೆ ಹಲ್ಲೆ ನಡೆಸಿ, ನನ್ನನ್ನು ಹತ್ಯೆಗೈಯ್ಯಲು ಪಿತೂರಿ ನಡೆಸುತ್ತಿದ್ದಾರೆ ಹಾಗೂ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ದೀಪಕ್ ಕುಮಾರ್ ಸ್ವರ್ಣಕರ್ ನೀಡಿದ್ದ ದೂರಿನಲ್ಲಿ ಮೇಲ್ನೋಟಕ್ಕೆ ಸತ್ಯಾಂಶವಿರುವುದನ್ನು ನ್ಯಾಯಾಲಯ ಪತ್ತೆ ಹಚ್ಚಿತ್ತು.