ಪತ್ರಕರ್ತೆ ರಾಣಾ ಅಯ್ಯೂಬ್ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಸೂಚಿಸಿದ ದಿಲ್ಲಿ ನ್ಯಾಯಾಲಯ

ರಾಣಾ ಅಯ್ಯೂಬ್ (Photo: X)
ಹೊಸದಿಲ್ಲಿ: 2016-17ರಲ್ಲಿ ಮಾಡಿರುವ ಸಾಮಾಜಿಕ ಜಾಲತಾಣಗಳಲ್ಲಿನ ಕೆಲ ಪೋಸ್ಟ್ ಗಳಿಗೆ ಸಂಬಂಧಿಸಿ ಪತ್ರಕರ್ತೆ ರಾಣಾ ಅಯ್ಯೂಬ್ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ದಿಲ್ಲಿ ನ್ಯಾಯಾಲಯ ಪೊಲೀಸರಿಗೆ ನಿರ್ದೇಶನ ನೀಡಿದೆ.
ಹಿಂದೂ ದೇವತೆಗಳಿಗೆ ಅವಮಾನ, ಭಾರತ ವಿರೋಧಿ ಭಾವನೆ ಪ್ರಚಾರ, ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತಂದ ಆರೋಪದಲ್ಲಿ ಪತ್ರಕರ್ತೆ ರಾಣಾ ಅಯ್ಯೂಬ್ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಸೂಚಿಸಿದ್ದು, ಈ ಕುರಿತು ನ್ಯಾಯಯುತವಾಗಿ ತನಿಖೆ ನಡೆಸುವಂತೆ ದಿಲ್ಲಿ ಪೊಲೀಸರಿಗೆ ನಿರ್ದೇಶನ ನೀಡಿದೆ.
ರಾಣಾ ಅಯ್ಯೂಬ್ ವಿರುದ್ಧ ಎಫ್ ಐಆರ್ ದಾಖಲಿಸಲು ನ್ಯಾಯಾಲಯದ ನಿರ್ದೇಶನಗಳನ್ನು ಕೋರಿ ವಕೀಲರೋರ್ವರು ದಿಲ್ಲಿ ಕೋರ್ಟ್ ಮೊರೆ ಹೋಗಿದ್ದರು. ಅಯ್ಯೂಬ್ ಅವರು ಎಕ್ಸ್ ನಲ್ಲಿ ಅವಹೇಳನಕಾರಿ ಪೋಸ್ಟ್ ಗಳನ್ನು ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.
ಅರ್ಜಿಯನ್ನು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಹಿಮಾಂಶು ರಮಣ್ ಸಿಂಗ್ ಅವರು ವಿಚಾರಣೆ ನಡೆಸಿದ್ದು, ದಕ್ಷಿಣ ದಿಲ್ಲಿಯ ಸೈಬರ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿಗೆ ದೂರಿನ ವಿಷಯಗಳನ್ನು FIR ಆಗಿ ಪರಿವರ್ತಿಸಲು ಮತ್ತು ವಿಷಯವನ್ನು ನ್ಯಾಯಯುತವಾಗಿ ತನಿಖೆ ಮಾಡಲು ನಿರ್ದೇಶಿಸಿದ್ದಾರೆ.