ಎಎನ್ಐ ವಿರುದ್ಧ ವಿಕಿಪೀಡಿಯಾ ಪ್ರಕರಣ | ನ್ಯಾಯಾಲಯಗಳು ಟೀಕೆಗಳಿಗೆ ಸಹಿಷ್ಣುತೆ ಹೊಂದಿರಬೇಕು: ಸುಪ್ರೀಂ ಕೋರ್ಟ್

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಮಾಧ್ಯಮಗಳು ನ್ಯಾಯಾಂಗ ಆದೇಶಗಳಿಗೆ ಸಂಬಂಧಿಸಿದಂತೆ ಅವಲೋಕನಗಳನ್ನು ಪ್ರಕಟಿಸುವುದನ್ನು ನಿರ್ಬಂಧಿಸುವ ಆದೇಶಗಳನ್ನು ನ್ಯಾಯಾಲಯಗಳು ಹೊರಡಿಸಬಾರದು ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯವು, ನ್ಯಾಯಾಲಯದ ಆದೇಶಗಳ ನ್ಯಾಯುಯುತ ಟೀಕೆಯನ್ನು ನ್ಯಾಯಾಂಗ ನಿಂದನೆಯೆಂದು ಪರಿಗಣಿಸುವಂತಿಲ್ಲ ಎಂದು ಒತ್ತಿ ಹೇಳಿದೆ.
ಸೋಮವಾರ ವಿಚಾರಣೆ ಸಂದರ್ಭ ಎಎನ್ಐ ಸುದ್ದಿಸಂಸ್ಥೆಯು ವಿಕಿಪೀಡಿಯಾ ವಿರುದ್ಧ ಹೂಡಿರುವ ಎರಡು ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ಪುಟವನ್ನು 36 ಗಂಟೆಗಳಲ್ಲಿ ತೆಗೆದುಹಾಕಬೇಕು ಎಂಬ ದಿಲ್ಲಿ ಉಚ್ಚ ನ್ಯಾಯಾಲಯದ ನಿರ್ದೇಶನದ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಈ ಸ್ಪಷ್ಟನೆಯನ್ನು ನೀಡಿತು.
‘ತಮ್ಮ ಆದೇಶಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿಯ ಕೆಲವು ಟೀಕೆಗಳ ಬಗ್ಗೆ ನ್ಯಾಯಾಲಯಗಳು ಏಕೆ ಸಿಡಿಮಿಡಿಗೊಳ್ಳಬೇಕು?’ ಎಂದು ಪ್ರಶ್ನಿಸಿದ ಪೀಠವು, ಸ್ವತಃ ಮಾಧ್ಯಮ ಸಂಸ್ಥೆಯಾಗಿರುವ ಎಎನ್ಐ ಮಾಹಿತಿಯನ್ನು ಪ್ರಸಾರ ಮಾಡುವ ಇನ್ನೊಂದು ಮಾಧ್ಯಮ ಸಂಸ್ಥೆಯ ವಿರುದ್ಧ ನಿರ್ಬಂಧ ಆದೇಶವನ್ನು ಕೋರಿದ್ದು ವಿಪರ್ಯಾಸವಾಗಿದೆ ಎಂದು ಟೀಕಿಸಿತು.
ವಿಕಿಪೀಡಿಯಾದಿಂದ ನ್ಯಾಯಾಂಗ ಆದೇಶದ ಟೀಕೆಯು ನ್ಯಾಯಾಲಯದ ಕಲಾಪಗಳಲ್ಲಿ ಹಸ್ತಕ್ಷೇಪಕ್ಕೆ ಸಮನಾಗಿದೆ ಎಂದು ಹೇಳಿದ್ದ ದಿಲ್ಲಿ ಉಚ್ಚ ನ್ಯಾಯಾಲಯದ ಕಳೆದ ವರ್ಷದ ಅಕ್ಟೋಬರ್ ನ ಆದೇಶವನ್ನೂ ಸರ್ವೋಚ್ಚ ನ್ಯಾಯಾಲಯವು ಪ್ರಶ್ನಿಸಿತು.
‘ನೀವು ಪೂರ್ವಕಲ್ಪಿತ ಮನಸ್ಸಿನೊಂದಿಗೆ ಇಲ್ಲಿ ಕುಳಿತಿದ್ದೀರಿ ಮತ್ತು ವಿಚಾರಣೆಯನ್ನು ಸರಿಯಾಗಿ ನಡೆಸುತ್ತಿಲ್ಲ ಎಂದು ಕೆಲವೊಮ್ಮೆ ಯಾರಾದರೂ ಹೇಳುತ್ತಿರುತ್ತಾರೆ. ಜನರು ಏನೇನೋ ಹೇಳುತ್ತಾರೆ ಮತ್ತು ನಾವು ಅದನ್ನು ಸಹಿಸಿಕೊಳ್ಳಬೇಕು’ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತು.
ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶವನ್ನು ವಿಕಿಪೀಡಿಯಾ ಪ್ರಶ್ನಿಸಿದ ಬಳಿಕ ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿದೆ.
ನ್ಯಾಯಾಲಯಗಳು ಇಂತಹ ನಿರ್ಬಂಧ ಆದೇಶಗಳನ್ನು ಹೊರಡಿಸಲು ಸಾಧ್ಯವಿಲ್ಲ. ನ್ಯಾಯಾಂಗ ನಿಂದನೆ ವಿರುದ್ಧ ಕ್ರಮಕ್ಕೆ ಯಾರಾದರೂ ಮುಂದಾಗಬಹುದು. ಆಗ ನೋಟಿಸ್ ಹೊರಡಿಸಲಾಗುತ್ತದೆ ಮತ್ತು ಉದ್ದೇಶಿತ ಪಕ್ಷವು ನ್ಯಾಯಾಂಗ ನಿಂದನೆಯನ್ನು ಹಿಂದೆಗೆದುಕೊಳ್ಳುವುದನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ನ್ಯಾಯಾಲಯದ ಆದೇಶದ ಕುರಿತು ಟೀಕೆಯಿದೆ ಎಂಬ ಮಾತ್ರಕ್ಕೆ ಏನನ್ನಾದರೂ ತೆಗೆದುಹಾಕುವಂತೆ ಯಾರಿಗಾದರೂ ಸೂಚಿಸುವುದು ಸರಿಯಲ್ಲ ಎಂದು ಪೀಠವು ಹೇಳಿತು.
ಸ್ವತಃ ನ್ಯಾಯಾಧೀಶರೂ ಆಗಾಗ್ಗೆ ಸಾರ್ವಜನಿಕ ಪರಿಶೀಲನೆ ಮತ್ತು ಟೀಕೆಗಳಿಗೆ ಗುರಿಯಾಗುತ್ತಾರೆ. ಆದರೆ ನ್ಯಾಯಾಲಯಗಳು ಅದನ್ನು ಅಪರಾಧವನ್ನಾಗಿಸುವ ಬದಲು ಕಾನೂನು ತತ್ವಗಳನ್ನು ಆಧರಿಸಿ ನಿರ್ಧರಿಸಬೇಕು ಎಂದು ಹೇಳಿದ ಪೀಠವು, ‘ನಾವು ನ್ಯಾಯಾಧೀಶರಾಗಿದ್ದರೂ ನಮ್ಮ ಬಗ್ಗೆ ತುಂಬ ಹೇಳಲಾಗುತ್ತದೆ. ನಾವು ಪೂರ್ವಾಗ್ರಹ ಪೀಡಿತರು ಎಂದು ಯಾರಾದರೂ ಹೇಳುತ್ತಾರೆ. ಅದು ಅವರ ಅಭಿಪ್ರಾಯ. ಆದರೆ ನಾವು ಕಾನೂನನ್ನು ಆಧರಿಸಿ ನಿರ್ಣಯವನ್ನು ತೆಗೆದುಕೊಳ್ಳುತ್ತೇವೆ ’ಎಂದು ತಿಳಿಸಿತು.
ವಿಕಿಪೀಡಿಯಾ ತನ್ನ ಪುಟದಲ್ಲಿ ಬಳಕೆದಾರರು ಮಾನಹಾನಿಕರ ಮಾಹಿತಿಗಳನ್ನು ಹಂಚಿಕೊಳ್ಳಲು ಅನುಮತಿಸಿದೆ ಎಂದು ದೂರಿ ಎಎನ್ಐ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದೆ. ಎಎನ್ಐ ಆಡಳಿತಾರೂಢ ಸರಕಾರದ ಪ್ರಚಾರ ಸಾಧನವಾಗಿದೆ ಎಂದು ವಿಕಿಪೀಡಿಯಾ ಬಳಕೆದಾರರು ಅದರ ಪುಟದಲ್ಲಿ ಉಲ್ಲೇಖಿಸಿದ್ದನ್ನು ಎನ್ಐಎ ಆಕ್ಷೇಪಿಸಿದೆ. ಈ ಹಿನ್ನೆಲೆಯಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯವು ಸದ್ರಿ ಪುಟವನ್ನು ತೆಗೆದುಹಾಕುವಂತೆ ವಿಕಿಪೀಡಿಯಾಕ್ಕೆ ಆದೇಶಿಸಿತ್ತು.