ಅಸಾಧಾರಣ ಪ್ರಕರಣಗಳನ್ನು ಹೊರತುಪಡಿಸಿ ಸಾಮಾನ್ಯವಾಗಿ ಜಾಮೀನು ಆದೇಶಗಳಿಗೆ ತಡೆ ನೀಡಬಾರದು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಹೊಸದಿಲ್ಲಿ: ಮಂಗಳವಾರ ಮಹತ್ವದ ತೀರ್ಪೊಂದರಲ್ಲಿ ಸರ್ವೋಚ್ಚ ನ್ಯಾಯಾಲಯವು ಜಾಮೀನು ಆದೇಶಗಳನ್ನು ಸಾಮಾನ್ಯವಾಗಿ ತಡೆಯಬಾರದು ಎಂದು ಎತ್ತಿ ಹಿಡಿದಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ಮಂಜೂರಾಗಿದ್ದ ಜಾಮೀನಿಗೆ ತಡೆಯಾಜ್ಞೆ ನೀಡಿದ್ದ ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶವನ್ನು ತಳ್ಳಿ ಹಾಕಿದ ಸರ್ವೋಚ್ಚ ನ್ಯಾಯಾಲಯವು,ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಜಾಮೀನು ಆದೇಶಗಳಿಗೆ ತಡೆಯನ್ನು ನೀಡಬಹುದು ಎಂದು ಹೇಳಿತು.
ಜಾಮೀನಿಗೆ ತಡೆಯಾಜ್ಞೆ ನೀಡಲು ನ್ಯಾಯಾಲಯಕ್ಕೆ ಅಧಿಕಾರವಿರಬಹುದು,ಆದರೆ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಅದನ್ನು ಮಾಡಬೇಕು. ಸಾಮಾನ್ಯವಾಗಿ ಜಾಮೀನು ಆದೇಶಗಳಿಗೆ ತಡೆ ನೀಡಬಾರದು ಎಂದು ತೀರ್ಪನ್ನು ಮೌಖಿಕವಾಗಿ ಪ್ರಕಟಿಸಿದ ನ್ಯಾ.ಎ.ಎಸ್. ಓಕಾ ಅವರು ಹೇಳಿದರು.
ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಪರ್ವಿಂದರ್ ಸಿಂಗ್ ಖರಾನಾ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ತೀರ್ಪನ್ನು ಪ್ರಕಟಿಸಿದೆ.
ಸರ್ವೋಚ್ಚ ನ್ಯಾಯಾಲಯವು ಜು.11ರಂದು ಹಿಂದಿನ ವಿಚಾರಣೆ ಸಂದರ್ಭದಲ್ಲಿ,ಯಾವುದೇ ಕಾರಣಗಳನ್ನು ನೀಡದೇ ನಿಯಮಿತ ಜಾಮೀನು ಆದೇಶವನ್ನು ತಡೆಹಿಡಿದಿದ್ದ ದಿಲ್ಲಿ ಉಚ್ಚ ನ್ಯಾಯಾಲಯದ ನಿರ್ಧಾರದ ಬಗ್ಗೆ ಆಘಾತವನ್ನು ವ್ಯಕ್ತಪಡಿಸಿತ್ತು. ನ್ಯಾ.ಓಕಾ ಅವರು,ವಿಚಾರಣಾ ನ್ಯಾಯಾಲಯವು ಜೂನ್ 2023ರಲ್ಲಿ ನೀಡಿದ್ದ ಜಾಮೀನು ಆದೇಶಕ್ಕೆ ಸುದೀರ್ಘ ಮಧ್ಯಂತರ ತಡೆಯಾಜ್ಞೆಯನ್ನು ಸಮರ್ಥಿಸಿಕೊಂಡಿದ್ದಕ್ಕಾಗಿ ಜಾರಿ ನಿರ್ದೇಶನಾಲಯ (ಈ.ಡಿ)ವನ್ನು ಪ್ರಶ್ನಿಸಿದ್ದರು.
ವಿಚಾರಣಾ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಎಲ್ಲ ಅಂಶಗಳನ್ನು ಪರಿಗಣಿಸಿಲ್ಲ ಎಂದು ವಾದಿಸಿದ್ದ ಈ.ಡಿ. ಪರ ವಕೀಲ ರೆಹೆಬ್ ಹುಸೇನ್ ಅವರು, ಆದೇಶವನ್ನು ಕಾಯ್ದಿರಿಸಿದ ಬಳಿಕ ಓರ್ವ ನ್ಯಾಯಾಧೀಶರು ಸೇರಿದಂತೆ ಹಲವಾರು ನ್ಯಾಯಾಧೀಶರು ಪ್ರಕರಣ ವಿಚಾರಣೆಯಿಂದ ಹಿಂದೆ ಸರಿದಿದ್ದರು ಎಂದು ಎತ್ತಿ ತೋರಿಸಿದ್ದರು. ಆರೋಪಿ ದೊಡ್ಡ ಮೊತ್ತದ ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿಕೊಂಡಿದ್ದ ಎಂದು ಹೇಳಿದ್ದರು.
ವಿಚಾರಣಾ ನ್ಯಾಯಾಲಯದ ತರ್ಕಬದ್ಧ ಜಾಮೀನು ಆದೇಶಕ್ಕೆ ದಿಲ್ಲಿ ಉಚ್ಚ ನ್ಯಾಯಾಲಯದ ಒಂದು ಸಾಲಿನ ತಡೆಯಾಜ್ಞೆಯನ್ನು ಈ.ಡಿ.ಸಮರ್ಥಿಸಿಕೊಳ್ಳಲು ಹೇಗೆ ಸಾಧ್ಯ ಎಂದು ಸರ್ವೋಚ್ಚ ನ್ಯಾಯಾಲಯವು ಪ್ರಶ್ನಿಸಿತ್ತು. ಈ ಪ್ರಕರಣದಲ್ಲಿ ಸ್ವಾತಂತ್ರ್ಯದ ಉಲ್ಲಂಘನೆಯ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ್ದ ನ್ಯಾ.ಓಕಾ,‘ದಯವಿಟ್ಟು ಪರಿಣಾಮಗಳನ್ನು ಪರಿಗಣಿಸಿ. ಜಾಮೀನು ಮಂಜೂರಾಗಿದೆ ಮತ್ತು ವಿಷಯವನ್ನು ಪರಿಶೀಲಿಸದೆ ನ್ಯಾಯಾಲಯವು ಅದಕ್ಕೆ ತಡೆಯನ್ನು ನೀಡುತ್ತದೆ ಹಾಗೂ ಒಂದು ವರ್ಷದ ಬಳಿಕ ನೀವು ರಿಟ್ ಅರ್ಜಿಯನ್ನು ವಜಾಗೊಳಿಸಲಾದ ಸನ್ನಿವೇಶವನ್ನು ಎದುರಿಸುತ್ತೀರಿ. ಒಂದು ವರ್ಷ ಕಾಲ ವ್ಯಕ್ತಿಯು ಯಾವುದೇ ಕಾರಣವಿಲ್ಲದೆ ಜೈಲಿನಲ್ಲಿ ಕೊಳೆಯುವುದು ಮುಂದುವರಿಯುತ್ತದೆ. ಇಲ್ಲಿ ಸ್ವಾತಂತ್ರ್ಯದ ಅಂಶದ ಬಗ್ಗೆ ನಾವು ಚಿಂತಿತರಾಗಿದ್ದೇವೆ ’ ಎಂದು ಹೇಳಿದ್ದರು.
ಜು.12ರಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಆರೋಪಿಯನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿದರೆ ದೇಶದಿಂದ ಪರಾರಿಯಾಗುವ ಸಾಧ್ಯತೆಯನ್ನು ಒತ್ತಿ ಹೇಳಿದ್ದರು. ಆರೋಪಿಯು ಒಮ್ಮೆ ನ್ಯಾಯಾಂಗದ ಅಧಿಕಾರ ವ್ಯಾಪ್ತಿಯಿಂದ ಹೊರಬಿದ್ದರೆ ಜಾಮೀನು ಷರತ್ತುಗಳಿಗೆ ಯಾವುದೇ ಅರ್ಥವಿರುವುದಿಲ್ಲ ಎಂದು ಅವರು ವಾದಿಸಿದ್ದರು.
ಆದರೆ ಆರೋಪಿಯ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ತನ್ನ ಕಳವಳವನ್ನು ಪುನರುಚ್ಚರಿಸಿದ್ದ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪನ್ನು ಕಾಯ್ದಿರಿಸುವ ಮುನ್ನ, ಆರೋಪಿಯು ಭಯೋತ್ಪಾದಕನಾಗಿದ್ದರೆ, ಎನ್‌ಐಎ ಕಾಯ್ದೆಯಡಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ,ದೇಶವಿರೋಧಿಯಾಗಿದ್ದರೆ ಇತ್ಯಾದಿ ಅಥವಾ ಜಾಮೀನು ಆದೇಶವು ದೋಷಪೂರ್ಣವಾಗಿದ್ದರೆ ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಜಾಮೀನನ್ನು ತಡೆಹಿಡಿಯಬಹುದು ಎಂದು ಒತ್ತಿ ಹೇಳಿತ್ತು.