ಕೋವ್ಯಾಕ್ಸಿನ್ ಅತ್ಯಂತ ಸುರಕ್ಷಿತ ಲಸಿಕೆ : ಭಾರತ್ ಬಯೊಟೆಕ್ ಸಮರ್ಥನೆ
PC : bharatbiotech.com
ಹೊಸದಿಲ್ಲಿ : ತನ್ನ ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್ನ ಸುರಕ್ಷತೆಯ ಕುರಿತು ವಿವಿಧ ಅಧ್ಯಯನಗಳನ್ನು ನಡೆಸಲಾಗಿದ್ದು, ಅದು ಅತ್ಯಂತ ಸುರಕ್ಷಿತ ಲಸಿಕೆಯಾಗಿದೆ ಎಂದು ಭಾರತ್ ಬಯೊಟೆಕ್ ಪ್ರತಿಪಾದಿಸಿದೆ.
ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಂಡ ಭಾರತೀಯರಲ್ಲಿ ಅಡ್ಡಪರಿಣಾಮಗಳು ಕಾಣಿಸಿಕೊಂಡಿದ್ದವು ಎಂದು ಬನಾರಸ್ ಹಿಂದು ವಿವಿಯ ಸಂಶೋಧಕರ ತಂಡದ ನೂತನ ಅಧ್ಯಯನವೊಂದನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿರುವ ಹಿನ್ನೆಲೆಯಲ್ಲಿ ಭಾರತ್ ಬಯೊಟೆಕ್ನ ಸಮರ್ಥನೆ ಹೊರಬಿದ್ದಿದೆ. ಕನಿಷ್ಠ ಒಂದು ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದವರ ಪೈಕಿ ಮೂರನೇ ಒಂದರಷ್ಟು ಜನರಲ್ಲಿ ಒಂದು ವರ್ಷದೊಳಗೆ ಅಡ್ಡ ಪರಿಣಾಮಗಳು ಉಂಟಾಗಿದ್ದವು ಎಂದು ಅಧ್ಯಯನ ವರದಿಯು ತಿಳಿಸಿತ್ತು. ಕೆಲವೇ ವಾರಗಳ ಹಿಂದೆ ಆಂಗ್ಲೋ-ಸ್ವೀಡಿಷ್ ಔಷಧಿ ತಯಾರಿಕೆ ಸಂಸ್ಥೆ ಆ್ಯಸ್ಟ್ರಾಝೆನೆಕಾ ಕೂಡ ತನ್ನ ಕೋವಿಡ್ ಲಸಿಕೆ ಕೋವಿಶೀಲ್ಡ್ ಪಡೆದವರಲ್ಲಿ ಇಂತಹುದೇ ಅಡ್ಡಪರಿಣಾಮಗಳನ್ನು ಒಪ್ಪಿಕೊಂಡಿತ್ತು.
ಅಧ್ಯಯನವು ಪರಿಣಾಮಕಾರಿ, ಮಾಹಿತಿಪೂರ್ಣವಾಗಿರಲು ಮತ್ತು ನಿಷ್ಪಕ್ಷವಾಗಿರಲು ಕೆಲವು ಹೆಚ್ಚುವರಿ ದತ್ತಾಂಶಗಳ ಅಗತ್ಯವಿದೆ ಎಂದು ಗುರುವಾರ ಹೇಳಿಕೆಯಲ್ಲಿ ತಿಳಿಸಿರುವ ಭಾರತ್ ಬಯೊಟೆಕ್, ಅಧ್ಯಯನಕ್ಕೆ ಮುನ್ನ ಅದರಲ್ಲಿ ಭಾಗವಹಿಸುವವರ ಸುರಕ್ಷತಾ ವಿವರಗಳನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ. ಜೊತೆಗೆ ಅಧ್ಯಯನದ ಅವಧಿಯಲ್ಲಿ ಲಸಿಕೆಯನ್ನು ಪಡೆದಿರದ ವ್ಯಕ್ತಿಗಳ ಸುರಕ್ಷತಾ ವಿವರಗಳೊಂದಿಗೆ ಹೋಲಿಕೆಯೂ ಅಗತ್ಯವಾಗುತ್ತದೆ ಎಂದು ಹೇಳಿದೆ.
ಅಧ್ಯಯನದ ಅವಧಿಯಲ್ಲಿ ಇತರ ಲಸಿಕೆಗಳನ್ನು ಪಡೆದಿದ್ದ ವ್ಯಕ್ತಿಗಳ ಸುರಕ್ಷತಾ ವಿವರಗಳ ಹೋಲಿಕೆಯೂ ಅಗತ್ಯವಾಗಿದೆ ಎಂದು ಹೇಳಿರುವ ಸಂಸ್ಥೆಯು,ಅಧ್ಯಯನದ ಅವಧಿಯಲ್ಲಿ ಒಂದು ಗುಂಪಿನ ಬದಲು ಅದರಲ್ಲಿ ಪಾಲ್ಗೊಂಡ ಎಲ್ಲರನ್ನೂ ಅನುಸರಿಸಬೇಕು ಎಂದು ತಿಳಿಸಿದೆ.