ಕೋವಿಡ್ ಲಾಕ್ಡೌನ್ನಿಂದ ಚಂದ್ರನ ತಾಪಮಾನ ಇಳಿಕೆ: ಅಧ್ಯಯನ ವರದಿ
PC: x.com/timesofindia
ಬೆಂಗಳೂರು: 2020 ರ ಜಾಗತಿಕ ಕೋವಿಡ್ ಲಾಕ್ಡೌನ್ಗಳು ಚಂದ್ರನಷ್ಟು ದೂರದವರೆಗೆ ಪ್ರಭಾವ ಬೀರಿರಬಹುದು ಎಂಬುದಕ್ಕೆ ಭಾರತೀಯ ಸಂಶೋಧಕರು ಪುರಾವೆಗಳನ್ನು ಕಂಡುಕೊಂಡಿದ್ದಾರೆ. ರಾಯಲ್ ಆಸ್ಟ್ರೋನಾಮಿಕಲ್ ಸೊಸೈಟಿಯ ಪೀರ್-ರಿವ್ಯೂಡ್ ಮಾಸಿಕ ನೋಟೀಸ್ನಲ್ಲಿ ಪ್ರಕಟವಾದ ಅಧ್ಯಯನವು ಏಪ್ರಿಲ್-ಮೇ 2020 ರ ಕಟ್ಟುನಿಟ್ಟಾದ ಲಾಕ್ಡೌನ್ ಅವಧಿಯಲ್ಲಿ ಚಂದ್ರನ ಮೇಲ್ಮೈ ತಾಪಮಾನವು ಅಸಂಗತ ಕುಸಿತವನ್ನು ತೋರಿಸಿದೆ ಎಂದು ತಿಳಿಸಿದೆ.
ಫಿಸಿಕಲ್ ರೀಸರ್ಚ್ ಲ್ಯಾಬೋರೇಟರಿಯ ಕೆ.ದುರ್ಗಾಪ್ರಸಾದ್ ಮತ್ತು ಜಿ.ಅಂಬಿಳಿ ಅವರು, ಚಂದ್ರನ ಮೇಲ್ಮೈಯ ಆರು ಭಿನ್ನ ಸ್ಥಳಗಳಲ್ಲಿ 2017 ಮತ್ತು 2023ರ ತಾಪಮಾನದ ಬಗ್ಗೆ ಮಾಹಿತಿ ವಿಶ್ಲೇಷಿಸಿದ್ದರು. "ಇದು ನಮ್ಮ ತಂಡದ ಅತ್ಯಂತ ಮಹತ್ವದ ಕಾರ್ಯ. ಇದು ಅತ್ಯಂತ ವಿಶಿಷ್ಟ"ಎಂದು ಪಿಆರ್ ಎಲ್ ನಿರ್ದೇಶಕ ಅನಿಲ್ ಭಾರದ್ವಜ್ ಹೇಳಿದ್ದಾರೆ.
ನಾಸಾದ ಲ್ಯೂನಾರ್ ರೆಕನೆನ್ಸ್ ಆರ್ಬಿಟರ್ ನ ಅಂಕಿ ಅಂಶಗಳನ್ನು ವಿಶ್ಲೇಷಿಸಲಾಗಿದ್ದು, ಲಾಕ್ಡೌನ್ ಜಾರಿಯಲ್ಲಿದ್ದ ಅವಧಿಯಲ್ಲಿ ಇತರ ವರ್ಷಗಳ ಇದೇ ಅವಧಿಗೆ ಹೋಲಿಸಿದರೆ ಚಂದ್ರನ ತಾಪಮಾನ8-10 ಕೆಲ್ವಿನ್ ಡಿಗ್ರಿಯಷ್ಟು ಕಡಿಮೆ ಇತ್ತು ಎಂದು ಸ್ಪಷ್ಟಪಡಿಸಿದ್ದಾರೆ.
"ವಾಸ್ತವವಾಗಿ ನಾವು 12 ವರ್ಷಗಳ ಅಂಕಿ ಅಂಶ ವಿಶ್ಲೇಷಿಸಿದ್ದೇವೆ. ಆದರೆ 2017 ರಿಂದ 2023ರವರೆಗೆ ಅಂದರೆ ಏಳು ವರ್ಷದ ಅಂಕಿ ಅಂಶವನ್ನು ಅಧ್ಯಯನಕ್ಕೆ ಬಳಸಿಕೊಂಡಿದ್ದೇವೆ. ಲಾಕ್ಡೌನ್ಗಿಂತ ಮೊದಲು ಮೂರು ವರ್ಷ ಹಾಗೂ ಲಾಕ್ಡೌನ್ ಬಳಿಕ ಮೂರು ವರ್ಷ ಹೀಗೆ ಸಮಾನತೆ ಅನುಸರಿಸಿದ್ದೇವೆ" ಎಂದು ಪ್ರಸಾದ್ ಹೇಳಿದ್ದಾರೆ. ಭೂಮಿಯ ಹೊರಮುಖ ವಿಕಿರಣ ಈ ಅವಧಿಯಲ್ಲಿ ಕಡಿಮೆ ಇದ್ದುದು ತಾಪಮಾನ ಇಳಿಕೆಗೆ ಕಾರಣ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.
ಮಾನವ ಚಟುವಟಿಕೆಗಳು ಗಣನೀಯವಾಗಿ ಕುಸಿತವಾಗಿದ್ದು, ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿಮೆಯಾಗಿದೆ. ಇದರಿಂದ ಭೂಮಿಯ ವಾತಾವರಣದ ಹಿಡಿದಿಟ್ಟುಕೊಳ್ಳುವ ಉಷ್ಣಾಂಶ ಮತ್ತು ಮರು ಹೊರಸೂಸುವಿಕೆ ಕಡಿಮೆಯಾಗಿದೆ ಎನ್ನುವುದು ವಿಶ್ಲೇಷಕರ ಅಭಿಮತ.