ಕೋವಿಡ್ ಲಸಿಕೆಯಿಂದ ಭಾರಿ ಪ್ರಮಾಣದ ಸಾವು?
ಎಲ್ಲ ಲಸಿಕೆಗಳನ್ನು ಅಮಾನತುಗೊಳಿಸಲು ತಜ್ಞ ವೈದ್ಯರ ಆಗ್ರಹ
ಸಾಂದರ್ಭಿಕ ಚಿತ್ರ | PC: PTI
ಲಂಡನ್ : ಕೋವಿಡ್-19 ಲಸಿಕೆಗಳಿಂದ ಸಾವಿನ ಪ್ರಮಾಣ ವಿಪರೀತ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿರುವ ಹಲವು ತಜ್ಞ ವೈದ್ಯರು ಹಾಗೂ ಆರೋಗ್ಯ ಸೇವೆ ವೃತ್ತಿಪರರು, ಎಲ್ಲ ಕೋವಿಡ್-19 ಲಸಿಕೆಗಳನ್ನು ತಕ್ಷಣದಿಂದಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಮನವಿ ಪತ್ರವೊಂದಕ್ಕೆ ಸಹಿ ಮಾಡಿದ್ದಾರೆ.
ಕೋವಿಡ್-19 ಲಸಿಕೆಯನ್ನು ನಿರಂತರವಾಗಿ ಬಳಸುವುದರಿಂದ ಆಗುವ ಅಪಾಯಗಳ ಕುರಿತು ಅಂತರರಾಷ್ಟ್ರೀಯ ಸಮುದಾಯದ ಗಮನ ಸೆಳೆಯಲು ಇತ್ತೀಚೆಗೆ HOPE Accord ಹೆಸರಿನ ಮನವಿ ಪತ್ರವು ಜಗತ್ತಿನಾದ್ಯಂತ ಸಹಿಗಳನ್ನು ಆಕರ್ಷಿಸಲು ಅಂತರ್ಜಾಲದಲ್ಲಿ ಪ್ರಕಟವಾಗಿದೆ.
ವಂಶವಾಹಿ ತಂತ್ರಜ್ಞಾನವನ್ನು ಹೊಂದಿರುವ ಈ ಲಸಿಕೆಗಳನ್ನು ಕೊರೊನಾ ವೈರಸ್ ಸಾಂಕ್ರಾಮಿಕವನ್ನು ಎದುರಿಸುವ ಸಾಧನವನ್ನಾಗಿ ತುರ್ತು ಬಳಕೆ ಮಾಡಲು ಅನುಮತಿ ನೀಡಲಾಗಿತ್ತು.
" ಕೋವಿಡ್-19 ವೈರಸ್ ಲಸಿಕೆಯನ್ನು ವ್ಯಾಪಕ ಬಳಕೆಗೆ ಬಿಡುಗಡೆ ಮಾಡಿರುವುದರಿಂದ, ಅವು ಅಂಗವೈಕಲ್ಯ ಮತ್ತು ಮರಣ ಪ್ರಮಾಣದಲ್ಲಿನ ವಿಪರೀತ ಏರಿಕೆಗೆ ಕೊಡುಗೆ ನೀಡುತ್ತಿರುವುದನ್ನು ಬೆಳೆಯುತ್ತಿರುವ ಸಾಕ್ಷಿಗಳು ಸೂಚಿಸುತ್ತಿವೆ” ಎಂದು HOPE Accord ಮನವಿ ಪತ್ರದಲ್ಲಿ ಹೇಳಲಾಗಿದೆ.
“ಈ ಲಸಿಕೆಯನ್ನು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಳಕೆ ಮಾಡಲು ಅನುಮತಿ ನೀಡಲಾಗಿದ್ದು, ಇದೀಗ ಅಂತಹ ಪರಿಸ್ಥಿತಿ ಉಳಿದಿಲ್ಲ. ಕೋವಿಡ್-19 ಲಸಿಕೆಯ ಉತ್ಪನ್ನಗಳ ಬಳಕೆಯನ್ನು ಈಗಲೂ ಶಿಫಾರಸು ಮಾಡುತ್ತಿರುವವರ ಮೇಲೆಯೇ ಅವು ನಿವ್ವಳ ಹಾನಿಗೆ ಕಾರಣವಾಗುವುದಿಲ್ಲ ಎಂಬುದನ್ನು ಸಾಬೀತು ಪಡಿಸಬೇಕಾದ ಹೊಣೆಗಾರಿಕೆಯಿದೆ. ಅಂತಹ ಸಾಕ್ಷಿಯನ್ನು ಒದಗಿಸುವವರೆಗೆ, ಪ್ರಮಾಣೀಕೃತ ವೈದ್ಯಕೀಯ ಮುನ್ನೆಚ್ಚರಿಕೆಯಾಗಿ ಅಂತಹ ಎಲ್ಲ ಲಸಿಕೆಗಳನ್ನು ನಿಯಂತ್ರಕರು ಅಮಾನತುಗೊಳಿಸಬೇಕು” ಎಂದೂ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಎಲ್ಲ ಕೋವಿಡ್ ಲಸಿಕೆಗಳ ಬಗ್ಗೆ ಹೆಚ್ಚು ಸಾಕ್ಷ್ಯಾಧಾರಿತ ಧೋರಣೆಯನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಸುದೀರ್ಘ ಕಾಲದಿಂದ ಅಭಿಯಾನ ನಡೆಸುತ್ತಿರುವ ಬ್ರಿಟನ್ ನ ಭಾರತೀಯ ಸಮಾಲೋಚಕ ಹೃದಯ ತಜ್ಞ ಡಾ. ಅಸೀಮ್ ಮಲ್ಹೋತ್ರಾ ಅವರು ಇತ್ತೀಚೆಗೆ ಬ್ರಿಟನ್ ನ ಪ್ರಧಾನ ವೈದ್ಯಕೀಯ ಮಂಡಳಿಗೆ ಪತ್ರ ಬರೆದ ನಂತರ, ಈ ಮನವಿ ಪತ್ರವನ್ನು ಸಿದ್ಧಪಡಿಸಲಾಗಿದೆ.