ಹರ್ಯಾಣ | ಗೋಕಳ್ಳಸಾಗಣೆ ಶಂಕೆಯಲ್ಲಿ ವ್ಯಕ್ತಿಯ ಥಳಿಸಿ ಹತ್ಯೆ: ಐವರ ಬಂಧನ

ಚಂಡೀಗಢ: ಗೋ ಕಳ್ಳಸಾಗಣೆಯಲ್ಲಿ ತೊಡಗಿದ್ದಾರೆ ಎಂಬ ಶಂಕೆಯಿಂದ ಟ್ರಕ್ ಚಾಲಕ ಹಾಗೂ ನಿರ್ವಾಹಕನನ್ನು ಅಪಹರಿಸಿರುವ ಗುಂಪೊಂದು, ಅವರ ಮೇಲೆ ಹಲ್ಲೆ ನಡೆಸಿದ ಪರಿಣಾಮ ನಿರ್ವಾಹಕ ಮೃತಪಟ್ಟಿರುವ ಘಟನೆ ಪಲ್ವಾಲ್ ನಲ್ಲಿ ನಡೆದಿದೆ. ಈ ಸಂಬಂಧ ರವಿವಾರ ಪೊಲೀಸರು ಐವರನ್ನು ಬಂಧಿಸಿದ್ದಾರೆ ಎಂದು The Times of India ವರದಿ ಮಾಡಿದೆ.
ಈ ಘಟನೆ ಫೆಬ್ರವರಿ 22ರಂದು ನಡೆದಿದ್ದು, ರಾಜಸ್ಥಾನದ ಗಂಗಾನಗರದಿಂದ ಉತ್ತರ ಪ್ರದೇಶ ಲಕ್ನೊಗೆ ಹಾಲು ಕರೆಯುವ ಹಸುಗಳನ್ನು ಸಾಗಿಸುವಾಗ, ಟ್ರಕ್ ನ ಚಾಲಕ ಹಾಗೂ ನಿರ್ವಾಹಕ ಹರ್ಯಾಣದಲ್ಲಿ ದಾರಿ ತಪ್ಪಿದ್ದರು ಎಂದು ಹೇಳಲಾಗಿದೆ.
ಈ ವೇಳೆ ದಾರಿ ಮಧ್ಯೆ ಟ್ರಕ್ ಅನ್ನು ಅಡ್ಡಗಟ್ಟಿರುವ ಸ್ವಘೋಷಿತ ಗೋರಕ್ಷಕರು, ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ನಡೆಸಿ, ಅವರನ್ನು ಗುರುಗ್ರಾಮದ ಬಳಿ ಇರುವ ಹಾಜಿಪುರದ ನಾಲೆಗೆ ಎಸೆದಿದ್ದಾರೆ ಎಂದು ಪಲ್ವಾಲ್ ನ ಉಪ ಪೊಲೀಸ್ ವರಿಷ್ಠಾಧಿಕಾರಿ (ಅಪರಾಧ) ಮನೋಜ್ ವರ್ಮ ತಿಳಿಸಿದ್ದಾರೆ.
ನಾಲೆಯಲ್ಲಿ ಈಜಿ ಜೀವಂತವಾಗಿ ಹೊರ ಬರುವಲ್ಲಿ ಯಶಸ್ವಿಯಾಗಿರುವ ಚಾಲಕ, ನಂತರ ಘಟನೆಯ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಚಾಲಕ ಹಾಗೂ ನಿರ್ವಾಹಕನನ್ನು ಎಸೆಯಲಾಗಿದ್ದ ಸ್ಥಳದಿಂದ ಸುಮಾರು 15 ಕಿಮೀ ದೂರದಲ್ಲಿನ ನಾಲೆಯಿಂದ ನಿರ್ವಾಹಕನ ಮೃತದೇಹ ಪತ್ತೆಯಾಗಿದೆ.
ವಿಚಾರಣೆಯ ಸಂದರ್ಭದಲ್ಲಿ ತಾವು ನಿರ್ವಾಹಕನನ್ನು ಹತ್ಯೆಗೈದಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ಈ ಪ್ರಕರಣದಲ್ಲಿನ ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.