ಪಶ್ಚಿಮ ಬಂಗಾಳ| ಪ್ರತಿಭಟನಾನಿರತ ವೈದ್ಯರ ಮೇಲೆ ಹಲ್ಲೆಗೆ ಸಂಚು ಆರೋಪ: ಸಿಪಿಎಂ ನಾಯಕ ಸೇರಿ ಇಬ್ಬರ ಬಂಧನ
ಕೋಲ್ಕತ್ತಾ: ಪ್ರತಿಭಟನಾನಿರತ ಕಿರಿಯ ವೈದ್ಯರ ಮೇಲೆ ಹಲ್ಲೆ ನಡೆಸುವ ಸಂಚು ರೂಪಿಸುತ್ತಿದ್ದ ಆರೋಪದ ಮೇಲೆ ಸಿಪಿ(ಐ)ಎಂ ನಾಯಕ ಕಲತನ್ ದಾಸ್ ಗುಪ್ತ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಸರಕಾರಕ್ಕೆ ಕಪ್ಪು ಮಸಿ ಬಳಿಯಲು ಸಾಲ್ಟ್ ಲೇಕ್ ನಲ್ಲಿನ ಸ್ವಾಸ್ಥ್ಯ ಭವನ್ ಹೊರಗೆ ಪ್ರತಿಭಟನೆ ನಡೆಸುತ್ತಿರುವ ಕಿರಿಯ ವೈದ್ಯರ ಮೇಲೆ ಹಲ್ಲೆ ನಡೆಸುವ ಸಂಚು ರೂಪಿಸಲಾಗುತ್ತಿದೆ ಎಂದು ಟಿಎಂಸಿ ನಾಯಕ ಕುನಾಲ್ ಘೋಷ್ ಕರೆಯೊಂದರ ಆಡಿಯೊ ತುಣುಕನ್ನು ಬಿಡುಗಡೆ ಮಾಡಿ ಆರೋಪಿಸಿದ್ದರು. ಇದರ ಬೆನ್ನಿಗೇ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಶುಕ್ರವಾರ ಬಿಡುಗಡೆಯಾಗಿದ್ದ ಈ ಆಡಿಯೊ ತುಣುಕನ್ನು ಆಧರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಲತನ್ ದಾಸ್ ಗುಪ್ತ ರೊಂದಿಗೆ ಸಂಜೀವ್ ದಾಸ್ ಎಂಬ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಸಂಜೀವ್ ದಾಸ್ ನನ್ನು ಶುಕ್ರವಾರ ರಾತ್ರಿ ದಕ್ಷಿಣ ಕೋಲ್ಕತ್ತಾದ ಹಲ್ತುವಿನಿಂದ ಬಂಧಿಸಲಾಗಿದ್ದರೆ, ದಾಸ್ ಗುಪ್ತರನ್ನು ಸೆಕ್ಟರ್ 5ರಲ್ಲಿರುವ ಸ್ವಾಸ್ಥ್ಯ ಭವನ್ ಬಳಿ ನಡೆಯುತ್ತಿರುವ ಪ್ರತಿಭಟನಾ ಸ್ಥಳದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವೈದ್ಯಕೀಯ ಸಿಬ್ಬಂದಿಗಳು ರಾಜ್ಯ ಆರೋಗ್ಯ ಇಲಾಖೆಯ ಪ್ರಧಾನ ಕಚೇರಿಯಾದ ಸ್ವಾಸ್ಥ್ಯ ಭವನದೆದುರು ಮಂಗಳವಾರದಿಂದ ಪ್ರತಿಭಟಿಸುತ್ತಿದ್ದಾರೆ. ಸರಕಾರಿ ಆಸ್ಪತ್ರೆಯಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಳೆದ ತಿಂಗಳು ನಡೆದ ತರಬೇತಿನಿರತ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಈ ಪ್ರತಿಭಟನೆ ನಡೆಯುತ್ತಿದೆ.