ಇಂಡಿಯಾ ಮೈತ್ರಿಯಲ್ಲಿ ಬಿರುಕು?; ತಾರಕಕ್ಕೇರಿದ ಕಾಂಗ್ರೆಸ್- ಆಪ್ ಸಂಘರ್ಷ
ಕಾಂಗ್ರೆಸ್ ಹೊರಹಾಕಲು ‘ಇಂಡಿಯಾ’ ಮೈತ್ರಿಕೂಟದ ಜೊತೆ ಮಾತುಕತೆ: ಆಪ್
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಪ್ರತಿಪಕ್ಷ ‘ಇಂಡಿಯಾ’ ಮೈತ್ರಿಕೂಟದ ಆಂತರಿಕ ಜಗಳ ತಾರಕಕ್ಕೇರಿದ್ದು, ಮೈತ್ರಿಕೂಟದಿಂದ ಕಾಂಗ್ರೆಸ್ ಪಕ್ಷವನ್ನು ಹೊರದಬ್ಬುವ ಬಗ್ಗೆ ಮೈತ್ರಿಕೂಟದಲ್ಲಿರುವ ಇತರ ಪಕ್ಷಗಳೊಂದಿಗೆ ಸಮಾಲೋಚಿಸುವುದಾಗಿ ಆಮ್ ಆದ್ಮಿ ಪಕ್ಷ (ಆಪ್) ಗುರುವಾರ ಬೆದರಿಕೆ ಹಾಕಿದೆ.
ಅಜಯ್ ಮಾಕನ್ ಸೇರಿದಂತೆ ದಿಲ್ಲಿ ಕಾಂಗ್ರೆಸ್ ನಾಯಕರು ಆಮ್ ಆದ್ಮಿ ಪಕ್ಷದ ವಿರುದ್ಧ ಆಡಿರುವ ಮಾತುಗಳಿಂದ ಆಪ್ ಅಸಮಾಧಾನಗೊಂಡಿದೆ ಎನ್ನಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಪ್ ನಾಯಕ ಸಂಜಯ್ ಸಿಂಗ್, ಅಜಯ್ ಮಾಕನ್ ವಿರುದ್ಧ ಯಾವುದೇ ಕ್ರಮ ಜರಗದಿದ್ದರೆ ಮೈತ್ರಿಕೂಟದಿಂದ ಕಾಂಗ್ರೆಸ್ಪಕ್ಷವನ್ನು ಉಚ್ಚಾಟಿಸುವ ಬಗ್ಗೆ ಮೈತ್ರಿಕೂಟದ ಇತರ ಘಟಕ ಪಕ್ಷಗಳೊಂದಿಗೆ ತನ್ನ ಪಕ್ಷವು ಸಮಾಲೋಚನೆ ನಡೆಸುವುದು ಎಂದು ಹೇಳಿದರು.
‘‘ಅಸ್ತಿತ್ವದಲ್ಲಿ ಇಲ್ಲದ’’ ಕಲ್ಯಾಣ ಯೋಜನೆಗಳ ಭರವಸೆಗಳ ಮೂಲಕ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಸಾರ್ವಜನಿಕರನ್ನು ‘‘ತಪ್ಪುದಾರಿಗೆಳೆಯುತ್ತಿದ್ದಾರೆ ಮತ್ತು ವಂಚಿಸುತ್ತಿದ್ದಾರೆ’’ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷವು ಅವರ ವಿರುದ್ಧ ದೂರು ನೀಡಿರುವುದು ಆಪ್ ಪಕ್ಷದ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳಿವೆ.
ದಿಲ್ಲಿ ಕಾಂಗ್ರೆಸ್ ಬುಧವಾರ ಆಪ್ ಮತ್ತು ಬಿಜೆಪಿ ವಿರುದ್ಧ 12 ಅಂಶಗಳ ‘‘ಶ್ವೇತಪತ್ರ’’ವೊಂದನ್ನು ಹೊರಡಿಸಿದೆ. ಮಾಲಿನ್ಯ, ನಾಗರಿಕ ಸವಲತ್ತುಗಳು ಹಾಗೂ ಕಾನೂನು ಮತ್ತು ವ್ಯವಸ್ಥೆಯನ್ನು ಕುಲಗೆಡಿಸಲಾಗಿದೆ ಹಾಗೂ ಈ ವಿಷಯಗಳಲ್ಲಿ ನೀಡಲಾಗಿರುವ ಭರವಸೆಗಳನ್ನು ಆಪ್ ಮತ್ತು ಬಿಜೆಪಿ ಈಡೇರಿಸಿಲ್ಲ ಎಂದು ಅದು ತನ್ನ ಶ್ವೇತಪತ್ರದಲ್ಲಿ ಆರೋಪಿಸಿದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಖಜಾಂಚಿ ಅಜಯ್ ಮಾಕನ್, ಆಪ್ ಸಂಚಾಲಕ ಅರವಿಂದ ಕೇಜ್ರಿವಾಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಆಪ್ ಜನಲೋಕಪಾಲ ಚಳವಳಿ ಮೂಲಕ ಅಧಿಕಾರಕ್ಕೆ ಬಂದಿದೆ, ಆದರೆ ಲೋಕಪಾಲ ವ್ಯವಸ್ಥೆಯನ್ನು ಸ್ಥಾಪಿಸುವಲ್ಲಿ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದರು.
‘‘ಇಡೀ ದೇಶದಲ್ಲಿ ವಂಚನೆಯ ದೊರೆ ಎಂಬುದಾಗಿ ಯಾರಾದರೂ ಇದ್ದರೆ ಅದು ಕೇಜ್ರಿವಾಲ್. ಅದಕ್ಕಾಗಿಯೇ ನಾವು ಕೇಜ್ರಿವಾಲ್ ಸರಕಾರ ಮತ್ತು ದಿಲ್ಲಿಯಲ್ಲಿರುವ ಬಿಜೆಪಿ ಸರಕಾರದ ವಿರುದ್ಧವೂ ಶ್ವೇತಪತ್ರದೊಂದಿಗೆ ಇಲ್ಲಿಗೆ ಬಂದಿದ್ದೇವೆ’’ ಎಂದಿದ್ದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಜಯ್ ಸಿಂಗ್, ‘‘ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ಬೇಕಾಗಿರುವ ಎಲ್ಲವನ್ನೂ ಕಾಂಗ್ರೆಸ್ ಮಾಡುತ್ತಿದೆ. ಅಜಯ್ ಮಾಕನ್ ಬಿಜೆಪಿ ಬರೆದುಕೊಟ್ಟಿರುವುದನ್ನು ಓದುತ್ತಿದ್ದಾರೆ’’ ಎಂದು ಆರೋಪಿಸಿದರು.
‘‘ಕಾಂಗ್ರೆಸ್ ನಾಯಕ ಅಜಯ್ ಮಾಕನ್, ಅರವಿಂದ ಕೇಜ್ರಿವಾಲ್ರನ್ನು ‘‘ದೇಶದ್ರೋಹಿ’’ ಎಂಬುದಾಗಿ ಕರೆದಿದ್ದಾರೆ. ಪಕ್ಷವು ಅವರ ವಿರುದ್ಧ 24 ಗಂಟೆಗಳಲ್ಲಿ ಕ್ರಮ ತೆಗೆದುಕೊಳ್ಳಬೇಕು. ದಿಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು, ಆಪ್ಗೆ ಹಾನಿ ಮಾಡುವ ಉದ್ದೇಶದಿಂದ ಬಿಜೆಪಿ ತಯಾರಿಸಿದಂತೆ ಕಾಣುತ್ತದೆ’’ ಎಂದು ಸಂಜಯ್ ಸಿಂಗ್ ಹೇಳಿದರು.