11 ಮಂದಿಯ ಸಾವಿಗೆ ಕಾರಣವಾದ ಪಟಾಕಿ ಕಾರ್ಖಾನೆ ಪರವಾನಗಿಯನ್ನೇ ಪಡೆದಿರಲಿಲ್ಲ: ವರದಿ
Photo: Ndtv
ಭೋಪಾಲ್: ಮಧ್ಯಪ್ರದೇಶದ ಹರ್ದಾದಲ್ಲಿನ ಪರವಾನಗಿ ರಹಿತ ಪಟಾಕಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 11 ಮಂದಿ ಮೃತಪಟ್ಟು, 174 ಮಂದಿ ಗಾಯಗೊಂಡಿದ್ದಾರೆ. ಈ ಕಾರ್ಖಾನೆಯು ಎರಡು ದಶಕಗಳಿಂದ ಅಸ್ತಿತ್ವದಲ್ಲಿದ್ದು, ಸೂಕ್ತ ಕಾರ್ಯಾಚರಣಾ ಪರವಾನಗಿ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿರಲಿಲ್ಲ ಎಂದು ಹೇಳಲಾಗಿದೆ ಎಂದು ndtv.com ವರದಿ ಮಾಡಿದೆ.
ಪಟಾಕಿ ಕಾರ್ಖಾನೆಯು ಸೂಕ್ತ ಪರವಾನಗಿ ಹೊಂದಿಲ್ಲದಿರುವ ಸಮಸ್ಯೆಯನ್ನು ಆ ಕಾರ್ಖಾನೆಯ ಮಾಲಕರು 2017ರಲ್ಲಿ ಸ್ಫೋಟಕ ಕಾಯ್ದೆಯಡಿ ಪರವಾನಗಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದಾಗಲೇ ಪತ್ತೆ ಹಚ್ಚಲಾಗಿತ್ತು. ರಾಜಧಾನಿ ಭೋಪಾಲ್ ನಿಂದ ಅಂದಾಜು 150 ಕಿಮೀ ದೂರದಲ್ಲಿ, ಹರ್ದಾ ಪಟ್ಟಣದ ಹೊರವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈ ಕಾರ್ಖಾನೆಯು ಸೂಕ್ತ ಪರವಾನಗಿ ಹೊಂದಿಲ್ಲದಿರುವುದನ್ನು ಆಗಿನ ಹರ್ದಾ ಜಿಲ್ಲಾಧಿಕಾರಿ ಪತ್ತೆ ಹಚ್ಚಿದ್ದರು. ಈ ಕಾರ್ಖಾನೆಯು ಹೊಂದಿದ್ದ ಪರವಾನಗಿಯು ಚೀನಾ ಮೂಲದ ಪಟಾಕಿಗಳು ಸೇರಿದಂತೆ ಪಟಾಕಿಗಳು ಹಾಗೂ ಸಿಡಿಮದ್ದುಗಳನ್ನು ಸಂಗ್ರಹಿಸಿಡಲು, ಮಾರಾಟ ಮಾಡಲು ಮಾತ್ರ ಪರವಾನಗಿ ಪಡೆದಿತ್ತು.
ಉಲ್ಲಂಘನೆಯ ಹೊರತಾಗಿಯೂ, ಜಿಲ್ಲಾಡಳಿತವು 2017ರಲ್ಲಿ ಕಾರ್ಖಾನೆಗೆ ಬೀಗ ಮುದ್ರೆ ಹಾಕುವವರೆಗೂ ಅದು ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿತ್ತು. ಇದಾದ ನಂತರ ಆಗಸ್ಟ್ 2018ರವರೆಗೆ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು. ಪಟಾಕಿ ಸಂಗ್ರಹ ಹಾಗೂ ಮಾರಾಟಕ್ಕೆ ಪರವಾನಗಿಯನ್ನು ನವೀಕರಣಗೊಳಿಸಿಕೊಳ್ಳುವ ಮೂಲಕ 2018-19ರಲ್ಲಿ ತನ್ನ ಕಾರ್ಯಾಚರಣೆಯನ್ನು ಮರು ಪ್ರಾರಂಭಿಸಿದ್ದ ಕಾರ್ಖಾನೆಯು, 2022ರವರೆಗೂ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿತ್ತು.
ಇದಾದ ನಂತರ, ಮೂರು ವರ್ಷಗಳ ಹಿಂದೆ ಈ ಕಾರ್ಖಾನೆಯಲ್ಲಿ ಸಂಭವಿಸಿದ ಮತ್ತೊಂದು ಸ್ಫೋಟದಲ್ಲಿ ಒಂದೇ ಕುಟುಂಬದ ಮೂವರು ಮಹಿಳೆಯರು ಮೃತಪಟ್ಟಿದ್ದರು. 2021ರಲ್ಲಿ ಸಂಭವಿಸಿದ ಮತ್ತೂ ಒಂದು ಸ್ಫೋಟದಲ್ಲಿ ಮತ್ತೆ ಮೂವರು ಮೃತಪಟ್ಟಿದ್ದರು. 2021ರಲ್ಲಿ ಸಂಭವಿಸಿದ್ದ ಸ್ಫೋಟಕ್ಕೆ ಸಂಬಂಧಿಸಿದಂತೆ ಕಾರ್ಖಾನೆಯ ಮಾಲೀಕರ ಪೈಕಿ ರಾಜೇಶ್ ಅಗರ್ವಾಲ್ ಎಂಬುವವರನ್ನು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಹಲವಾರು ಸ್ಫೋಟಗಳು ಹಾಗೂ ಸುರಕ್ಷತಾ ಕಳವಳಗಳಿದ್ದರೂ, 2022ರವರೆಗೆ ಕಾರ್ಖಾನೆಯ ಪರವಾನಗಿ ನವೀಕರಣಗೊಳಿಸಲಾಗಿತ್ತು. ಆ ಮೂಲಕ ಇತ್ತೀಚೆಗೆ ನಡೆದ ಪಟಾಕಿ ಸ್ಫೋಟ ದುರಂತದವರೆಗೂ ಪಟಾಕಿ ಉತ್ಪಾದನೆಗೆ ಅವಕಾಶ ನೀಡಲಾಗಿತ್ತು.
ಸದ್ಯ, ಪಟಾಕಿ ಸ್ಫೋಟದ ಸಂಬಂಧ ಕಾರ್ಖಾನೆಯ ಮಾಲಕರಾದ ರಾಜೇಶ್ ಅಗರ್ವಾಲ್ ಹಾಗೂ ಸೋಮೇಶ್ ಅಗರ್ವಾಲ್ ರನ್ನು ಬಂಧಿಸಿದ್ದು, ಸ್ಫೋಟಕ್ಕೆ ಸಂಬಂಧಿಸಿದಂತೆ ರಫೀಕ್ ಖಾನ್ ಎಂಬ ಮತ್ತೋರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಲು ಮುಖ್ಯಮಂತ್ರಿ ಮೋಹನ್ ಯಾದವ್, ಹಮಿದಿಯ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಎಲ್ಲ ಜಿಲ್ಲೆಗಳಲ್ಲಿನ ಇಂತಹ ಸ್ಥಳಗಳ ಬಗ್ಗೆ ಪರಿಶೀಲನಾ ವರದಿಯನ್ನು ಕೇಳಿದ್ದೇನೆ. ನಾವು ಅವರು ನೆನಪಿಟ್ಟುಕೊಳ್ಳುವಂತೆ ಕ್ರಮ ತೆಗೆದುಕೊಳ್ಳಲಿದ್ದೇವೆ” ಎಂದು ಭರವಸೆ ನೀಡಿದ್ದಾರೆ.
ಈ ನಡುವೆ, ಘಟನೆಯ ಸಂತ್ರಸ್ತ ಕುಟುಂಬದ ಸದಸ್ಯರಿಗೆ ತಲಾ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ರೂ. 2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ರೂ. 50,000 ಪರಿಹಾರ ವಿತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ.