2023ರಲ್ಲಿ ವಿಶ್ವದ ಗರಿಷ್ಠ ಗೋಲ್ ಸ್ಕೋರರ್ ಆದ ಕ್ರಿಸ್ಟಿಯಾನೊ ರೊನಾಲ್ಡೊ
ರೊನಾಲ್ಡೊ | Photo: X
ಹೊಸದಿಲ್ಲಿ: ಫುಟ್ಬಾಲ್ ದಂತಕತೆ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವದ ಗರಿಷ್ಠ ಗೋಲ್ ಸ್ಕೋರರ್ ಎಂಬ ಹಿರಿಮೆಯೊಂದಿಗೆ 2023ರ ವರ್ಷಕ್ಕೆ ವಿದಾಯ ಹೇಳಿದರು. ಪೋರ್ಚುಗಲ್ ಸೂಪರ್ಸ್ಟಾರ್ ರೊನಾಲ್ಡೊ 2024ನೇ ವರ್ಷದಲ್ಲೂ ಇದೇ ರೀತಿಯ ಸಾಧನೆ ಮಾಡುವ ಉದ್ದೇಶವಿದೆ ಎಂದು ಹೇಳಿದ್ದಾರೆ.
2023ನೇ ವರ್ಷದುದ್ದಕ್ಕೂ ಐದು ಬಾರಿಯ ಬ್ಯಾಲನ್ ಡಿ ಒರ್ ಪ್ರಶಸ್ತಿ ವಿಜೇತ ರೊನಾಲ್ಡೊ ತನ್ನ ರಾಷ್ಟ್ರೀಯ ತಂಡ ಹಾಗೂ ತನ್ನ ಈಗಿನ ಕ್ಲಬ್ ಅಲ್ ನಸ್ರ್ ಪರವಾಗಿ ಒಟ್ಟು 54 ಗೋಲುಗಳನ್ನು ಗಳಿಸಿದ್ದರು. ಇಂಗ್ಲೆಂಡ್ನ ಸ್ಟ್ರೈಕರ್ ಹ್ಯಾರಿ ಕೇನ್ ತನ್ನ ರಾಷ್ಟ್ರೀಯ ತಂಡ ಹಾಗೂ ನೂತನ ಕ್ಲಬ್ ಬಯೆರ್ನ್ ಮ್ಯೂನಿಚ್ ಪರ ಒಟ್ಟು 52 ಗೋಲುಗಳನ್ನು ಗಳಿಸಿ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
ಪ್ಯಾರಿಸ್ ಸೇಂಟ್ ಜರ್ಮೈನ್ನ(ಪಿಎಸ್ಜಿ) ಫ್ರೆಂಚ್ ಆಟಗಾರ ಕೈಲಿಯನ್ ಎಂಬಾಪೆ 52 ಗೋಲುಗಳನ್ನು ಗಳಿಸಿದರೆ, ನಾರ್ವೆಯ ಸ್ಟೈಕರ್ ಎರ್ಲಿಂಗ್ ಹಾಲ್ಯಾಂಡ್ 50 ಗೋಲುಗಳನ್ನು ದಾಖಲಿಸಿದ್ದಾರೆ.
ಈ ಮೈಲಿಗಲ್ಲನ್ನು ತಲುಪಿ, ನನ್ನ ಕ್ಲಬ್ ಹಾಗೂ ದೇಶದ ಗೆಲುವಿಗೆ ನೆರವಾಗಿರುವುದಕ್ಕೆ ನನಗೆ ತುಂಬಾ ಖುಷಿಯಾಗಿದೆ. ವೈಯಕ್ತಿಕ ಹಾಗೂ ಒಟ್ಟಾರೆ ನನ್ನ ಪಾಲಿಗೆ 2023ನೇ ವರ್ಷ ಹರ್ಷದಾಯಕವಾಗಿತ್ತು. ನನ್ನ ತಂಡ ಹಾಗೂ ಕ್ಲಬ್ ಗೆಲುವಿಗೆ ಸಾಕಷ್ಟು ನೆರವಾಗಿದ್ದೇನೆ. ಮುಂದಿನ ವರ್ಷವೂ ಇದೇ ರೀತಿಯ ಪ್ರದರ್ಶನ ನೀಡಲು ಪ್ರಯತ್ನಿಸುವೆ ಎಂದು ರೊನಾಲ್ಡೊ ತಿಳಿಸಿದರು.
ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರನಾಗಿರುವ ರೊನಾಲ್ಡೊ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. 2023ರಲ್ಲಿ ಸೌದಿ ಅರೇಬಿಯದ ಅಲ್ ನಸ್ರ್ ಕ್ಲಬ್ ಪರ ಸಹಿ ಹಾಕಿದ್ದರು. ಆ ನಂತರ ತನ್ನ ಹೊಸ ತಂಡದ ಪರ 50 ಪಂದ್ಯಗಳನ್ನು ಆಡಿದ್ದು 44 ಗೋಲುಗಳನ್ನು ಗಳಿಸಿದ್ದರು.
ಈಗ ನಡೆಯುತ್ತಿರುವ ಸೌದಿ ಪ್ರೊ ಲೀಗ್ ನಲ್ಲಿ ರಿಯಾದ್ ಮೂಲದ ಕ್ಲಬ್ ಪರ 18 ಪಂದ್ಯಗಳಲ್ಲಿ ಆಡಿರುವ ರೊನಾಲ್ಡೊ ಒಟ್ಟು 20 ಗೋಲುಗಳನ್ನು ಗಳಿಸಿದರು.