ಮತಗಳ ಅಡ್ಡ- ಪರಿಶೀಲನೆ ಪ್ರಕರಣ : ವ್ಯವಸ್ಥೆಯನ್ನು ಕೆಡಿಸಲು ಪ್ರಯತ್ನಿಸಬೇಡಿ: ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | Photo: PTI
ಹೊಸದಿಲ್ಲಿ: ‘ನಾವು ಯಾರನ್ನಾರೂ ನಂಬಲೇಬೇಕು. ಮತಪತ್ರಗಳ ಮೂಲಕ ಚುನಾವಣೆಗಳು ನಡೆಯುತ್ತಿದ್ದಾಗ ಏನು ನಡೆಯುತ್ತಿತ್ತು ಎನ್ನುವುದು ನಮಗೆಲ್ಲರಿಗೂ ಗೊತ್ತಿದೆ. ಈಗಿರುವ ವ್ಯವಸ್ಥೆಯನ್ನು ಕೆಡಿಸಲು ಪ್ರಯತ್ನಿಸಬೇಡಿ. ನೀವು ನೀಡುವ ಐರೋಪ್ಯ ದೇಶಗಳ ನಿದರ್ಶನಗಳು ಇಲ್ಲಿ ಕೆಲಸ ಮಾಡುವುದಿಲ್ಲ ’ ಎಂದು ಮಂಗಳವಾರ ಮತಗಳ ಅಡ್ಡ-ಪರಿಶೀಲನೆ ಪ್ರಕರಣದಲ್ಲಿ ಅರ್ಜಿದಾರರಿಗೆ ಸರ್ವೋಚ್ಚ ನ್ಯಾಯಾಲಯವು ಚಾಟಿ ಬೀಸಿತು.
ವಿದ್ಯುನ್ಮಾನ ಮತದಾನ ಯಂತ್ರದಲ್ಲಿ ದಾಖಲಿಸಲಾದ ಮತಗಳೊಂದಿಗೆ ವಿವಿಪ್ಯಾಟ್ ಮತಗಳ ಅಡ್ಡ-ಪರಿಶೀಲನೆಯನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯವು ಮತಪತ್ರಗಳನ್ನು ಬಳಸಿ ಗುಪ್ತ ಮತದಾನ ಪದ್ಧತಿಯಲ್ಲಿನ ಸಮಸ್ಯೆಗಳನ್ನು ಬೆಟ್ಟು ಮಾಡಿತು.
‘ನಾವೆಲ್ಲ ನಮ್ಮ 60ರ ಹರೆಯದಲ್ಲಿದ್ದೇವೆ. ಮತಪತ್ರಗಳಿದ್ದಾಗ ಏನಾಗಿತ್ತು ಎನ್ನುವುದು ನಮಗೆಲ್ಲರಿಗೆ ತಿಳಿದಿದೆ. ನೀವು ಮರೆತಿರಬಹುದು,ಆದರೆ ನಾವು ಮರೆತಿಲ್ಲ ’ ಎಂದು ನ್ಯಾ.ಸಂಜೀವ ಖನ್ನಾ ಅವರು ಅರ್ಜಿದಾರರ ಪೈಕಿ ಒಂದಾಗಿರುವ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್)ನ ಪರ ವಕೀಲ ಪ್ರಶಾಂತ ಭೂಷಣ್ ಅವರಿಗೆ ತಿಳಿಸಿದರು.
ಹೆಚ್ಚಿನ ಐರೋಪ್ಯ ದೇಶಗಳು ಇವಿಎಂಗಳಿಂದ ಮತಪತ್ರಗಳಿಗೆ ಮರಳಿವೆ ಎಂದು ವಾದಿಸಿದ ಭೂಷಣ್,‘ನಾವು ಮತಪತ್ರಗಳ ಪದ್ಧತಿಗೆ ಮರಳಬಹುದು. ಇನ್ನೊಂದು ಆಯ್ಕೆಯೆಂದರೆ ವಿವಿಪ್ಯಾಟ್ ಚೀಟಿಯನ್ನು ಮತದಾರರ ಕೈಗೆ ನೀಡುವುದು ಮತ್ತು ಅವರ ಮೂಲಕ ಮತಪೆಟ್ಟಿಗೆಯಲ್ಲಿ ಹಾಕಿಸುವುದು. ಇಲ್ಲದಿದ್ದರೆ ಚೀಟಿಗಳು ಯಂತ್ರದಲ್ಲಿ ಬೀಳುತ್ತವೆ. ವಿವಿಪ್ಯಾಟ್ ಯಂತ್ರದ ಗಾಜು ಅಪಾರದರ್ಶಕವಾಗಿದೆ ಮತ್ತು ದೀಪ ಆನ್ ಆದಾಗ ಕೇವಲ ಏಳು ಸೆಕೆಂಡ್ ಗಳ ಕಾಲ ಮಾತ್ರ ವಿವಿಪ್ಯಾಟ್ ಚೀಟಿಯನ್ನು ವೀಕ್ಷಿಸಬಹುದು. ವಿವಿಪ್ಯಾಟ್ ವಿನ್ಯಾಸವನ್ನು ಬದಲಿಸಬೇಕು ಮತ್ತು ಪಾರದರ್ಶಕ ಗಾಜನ್ನು ಅಳವಡಿಸಬೇಕು ಎಂದರು.
ಭೂಷಣ್ ಜರ್ಮನಿಯ ಉದಾಹರಣೆಯನ್ನು ಉಲ್ಲೇಖಿಸಿದಾಗ ನ್ಯಾ.ದೀಪಂಕರ್ ದತ್ತಾ ಅವರು ಜರ್ಮನಿಯ ಜನಸಂಖ್ಯೆ ಎಷ್ಟಿದೆ ಎಂದು ಪ್ರಶ್ನಿಸಿದರು. ಅದು ಸುಮಾರು ಆರು ಕೋಟಿಯಷ್ಟಿದ್ದು ಭಾರತದಲ್ಲಿ 50-50 ಕೋಟಿ ಮತದಾರರಿದ್ದಾರೆ ಎಂದು ಭೂಷಣ್ ಉತ್ತರಿಸಿದರು.
‘ಭಾರತದಲ್ಲಿ 97 ಕೋಟಿ ನೋಂದಾಯಿತ ಮತದಾರರಿದ್ದಾರೆ. ಮತಪತ್ರಗಳಿದ್ದಾಗ ಏನಾಗಿತ್ತು ಎನ್ನುವುದು ನಮಗೆಲ್ಲರಿಗೂ ಗೊತ್ತಿದೆ ’ಎಂದು ನ್ಯಾ.ಖನ್ನಾ ಹೇಳಿದರು.
ಅರ್ಜಿದಾರರಲ್ಲೋರ್ವರ ಪರ ಹಿರಿಯ ವಕೀಲ ಸಂಜಯ್ ಹೆಗ್ಡೆಯವರು, ಎವಿಎಂ ಗಳಲ್ಲಿ ದಾಖಲಾದ ಮತಗಳನ್ನು ವಿವಿ ಪ್ಯಾಟ್ ಚೀಟಿಗಳೊಂದಿಗೆ ತಾಳೆ ಹಾಕುವ ಅಗತ್ಯವಿದೆ ಎಂದು ಹೇಳಿದಾಗ ನ್ಯಾ.ಖನ್ನಾ, 60 ಕೋಟಿ ವಿವಿಪ್ಯಾಟ್ ಚೀಟಿಗಳನ್ನು ಎಣಿಸಬೇಕು ಎಂದು ನೀವು ಹೇಳುತ್ತಿದ್ದೀರಿ, ಸರಿಯೇ ಎಂದು ಪ್ರಶ್ನಿಸಿದರು.
ಮಾನವ ಹಸ್ತಕ್ಷೇಪಗಳು ಸಮಸ್ಯೆಗಳಿಗೆ ಕಾರಣವಾಗುತ್ತವೆ ಮತ್ತು ಪಕ್ಷಪಾತಕ್ಕೂ ಕಾರಣವಾಗಬಹುದು ಎಂದು ಹೇಳಿದ ನ್ಯಾ.ಖನ್ನಾ, ‘ಯಂತ್ರವು ಸಾಮಾನ್ಯವಾಗಿ ಮಾನವ ಹಸ್ತಕ್ಷೇಪವಿಲ್ಲದೆ ನಿಖರವಾದ ಫಲಿತಾಂಶಗಳನ್ನು ನಿಮಗೆ ನೀಡುತ್ತದೆ. ಸಾಫ್ಟ್ವೇರ್ ಅಥವಾ ಯಂತ್ರದಲ್ಲಿ ಅನಧಿಕೃತ ಬದಲಾವಣೆಗಳನ್ನು ಮಾಡಿದರೆ ಸಮಸ್ಯೆ ಸೃಷ್ಟಿಯಾಗುತ್ತದೆ. ಇದನ್ನು ತಡೆಯಲು ನಿಮ್ಮ ಬಳಿ ಏನಾದರೂ ಸಲಹೆ ಇದ್ದರೆ ನಮಗೆ ನೀಡಬಹುದು ’ಎಂದರು.
ಈ ವೇಳೆ ಭೂಷಣ್ ಅವರು ಇವಿಎಂ ಗಳನ್ನು ತಿರುಚುವ ಸಾಧ್ಯತೆಯ ಕುರಿತು ಸಂಶೋಧನಾ ಪ್ರಬಂಧವೊಂದನ್ನು ಓದಿದರು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ಶೇ.5ರಷ್ಟು ಇವಿಎಂ ಗಳನ್ನು ವಿವಿಪ್ಯಾಟ್ ಗಳೊಂದಿಗೆ ತಾಳೆ ಹಾಕಲಾಗುತ್ತಿದೆ ಮತ್ತು ಇದು ಸಮರ್ಥನೀಯವಲ್ಲ ಎಂದು ಅವರು ಹೇಳಿದರು.
ವ್ಯವಸ್ಥೆಯಲ್ಲಿ ದುರುದ್ದೇಶವಿದೆ ಎಂದು ನಾವು ಹೇಳುತ್ತಿಲ್ಲ. ತಾನು ಹಾಕಿದ ಮತದಲ್ಲಿ ಮತದಾರನ ವಿಶ್ವಾಸದ್ದೇ ಸಮಸ್ಯೆ ಎಂದು ಹಿರಿಯ ವಕೀಲ ಗೋಪಾಲ ಶಂಕರನಾರಾಯಣ ಹೇಳಿದರು.
ನಂತರ ನ್ಯಾಯಾಲಯವು ಮತದಾನ ಪ್ರಕಿಯೆ, ಇವಿಎಂ ಗಳ ದಾಸ್ತಾನು ಮತ್ತು ಮತಗಳ ಎಣಿಕೆಗಳ ಬಗ್ಗೆ ಚುನಾವಣಾ ಆಯೋಗವನ್ನು ಪ್ರಶ್ನಿಸಿತು.
ಇವಿಎಂ ಗಳ ತಿರುಚುವಿಕೆಗೆ ಕಠಿಣ ಶಿಕ್ಷೆಯನ್ನು ವಿಧಿಸಲು ಯಾವುದೇ ನಿಬಂಧನೆಯಿಲ್ಲ ಎನ್ನುವುದನ್ನು ಗಮನಿಸಿದ ನ್ಯಾ.ಖನ್ನಾ, ಇದು ಗಂಭೀರವಾದ ವಿಷಯವಾಗಿದೆ. ಶಿಕ್ಷೆಯ ಭೀತಿಯಿರಬೇಕು ಎಂದರು.
ಭಾರತೀಯ ಚುನಾವಣೆಯನ್ನು ವಿದೇಶಗಳಲ್ಲಿನ ಮತದಾನದೊಂದಿಗೆ ಹೋಲಿಸದಂತೆ ಅರ್ಜಿದಾರರ ವಕೀಲರಿಗೆ ಸೂಚಿಸಿದ ನ್ಯಾ.ದತ್ತಾ, ‘ನನ್ನ ತವರು ರಾಜ್ಯ ಪಶ್ಚಿಮ ಬಂಗಾಳದ ಜನಸಂಖ್ಯೆ ಜರ್ಮನಿಗಿಂತ ಹೆಚ್ಚಿದೆ. ನಾವು ಯಾರನ್ನಾರೂ ನಂಬಲೇಬೇಕು. ಇಂತಹ ವ್ಯವಸ್ಥೆಯನ್ನು ಕೆಡಿಸಲು ಪ್ರಯತ್ನಿಸಬೇಡಿ. ಇಂತಹ ಉದಾಹರಣೆಗಳನ್ನು ನೀಡಬೇಡಿ. ಐರೋಪ್ಯ ಉದಾಹರಣೆಗಳು ಇಲ್ಲಿ ಕೆಲಸ ಮಾಡುವುದಿಲ್ಲ ’ಎಂದರು.