ಪತಿ ಮತ್ತು ಕುಟುಂಬದ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸಲು ಸೆಕ್ಷನ್ 498Aಯ ದುರುಪಯೋಗ: ಸುಪ್ರೀಂ ಕೋರ್ಟ್ ಕಳವಳ
ಹೊಸದಿಲ್ಲಿ: ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498Aಯ ದುರುಪಯೋಗದ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಪತ್ನಿಯು ತನ್ನ ಅಸಮಂಜಸ ಬೇಡಿಕೆಗಳನ್ನು ಅನುಸರಿಸುವಂತೆ ಪತಿಯನ್ನು ಒತ್ತಾಯಿಸಲು ಕಾನೂನನ್ನು ದುರ್ಬಳಕೆ ಮಾಡುತ್ತಿರುವುದು ಕಂಡು ಬಂದಿದೆ ಎಂದು ಹೇಳಿದೆ.
ಕೌಟುಂಬಿಕ ದೌರ್ಜನ್ಯ ಮತ್ತು ಕಿರುಕುಳದಿಂದ ಮಹಿಳೆಯರನ್ನು ರಕ್ಷಿಸಲು ಉದ್ದೇಶಿಸಲಾದ ಈ ನಿಬಂಧನೆಯು ಕೆಲವೊಮ್ಮೆ ತನ್ನ ಪತಿ ಮತ್ತು ಆತನ ಕುಟುಂಬವನ್ನು ತನ್ನ ಅವಿವೇಕದ ಬೇಡಿಕೆಗಳನ್ನು ಅನುಸರಿಸುವಂತೆ ಒತ್ತಾಯಿಸಲು ಕೆಲ ಮಹಿಳೆಯರು ಬಳಸಿಕೊಳ್ಳುತ್ತಿದ್ದಾರೆ ಎಂದು ನ್ಯಾಯಮೂರ್ತಿ ಬಿವಿ ನಾಗರತ್ನ ಮತ್ತು ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ಅವರ ಪೀಠವು ಹೇಳಿದೆ.
ಪತಿ ಮತ್ತು ಆತನ ಕುಟುಂಬದ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸಲು ಕೆಲ ಮಹಿಳೆಯರು ಈ ನಿಬಂಧನೆಯನ್ನು ಸಾಧನವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಹೇಳಿದೆ.
ವಿಚ್ಛೇದನಕ್ಕೆ ಪತಿ ಮನವಿ ಸಲ್ಲಿಸಿದ ನಂತರ ಪತ್ನಿ ತನ್ನ ಪತಿ ಮತ್ತು ಅತ್ತೆಯ ವಿರುದ್ಧ ಈ ಪ್ರಕರಣಗಳನ್ನು ದಾಖಲಿಸಿದ್ದರು. ಪ್ರಕರಣವನ್ನು ರದ್ದುಗೊಳಿಸಲು ತೆಲಂಗಾಣ ಹೈಕೋರ್ಟ್ ನಿರಾಕರಿಸಿದನ್ನು ಪ್ರಶ್ನಿಸಿ ಪತಿ ಮತ್ತು ಅವರ ಕುಟುಂಬ ಸದಸ್ಯರು ಸುಪ್ರೀಂ ಮೊರೆ ಹೋಗಿದ್ದರು.
ಸೆಕ್ಷನ್ 498ಎ ದುರುಪಯೋಗದ ಬಗ್ಗೆ ನ್ಯಾಯಾಲಯ ವಿಷಾದಿಸುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ, ನ್ಯಾಯಾಲಯವು ಸೆಕ್ಷನ್ 498ಎ ಹೆಚ್ಚು ದುರುಪಯೋಗವಾಗುತ್ತಿದೆ ಎಂದು ಟೀಕಿಸಿತ್ತು.