ಸಿಡಬ್ಲ್ಯುಸಿಯ ಐತಿಹಾಸಿಕ ನಿರ್ಧಾರ ಬಡವರ ಅಭಿವೃದ್ಧಿಗೆ ‘‘ಶಕ್ತಿಶಾಲಿ ಹೆಜ್ಜೆ‘‘ : ರಾಹುಲ್ ಗಾಂಧಿ
ಜಾತಿ ಗಣತಿಗೆ ಬೆಂಬಲ ಸೂಚಿಸಿದ ಕಾಂಗ್ರೆಸ್
ರಾಹುಲ್ ಗಾಂಧಿ | Photo: PTI
ಹೊಸದಿಲ್ಲಿ: ರಾಷ್ಟ್ರ ವ್ಯಾಪಿ ಜಾತಿ ಗಣತಿ ನಡೆಸುವ ಕಲ್ಪನೆಗೆ ಬೆಂಬಲಿಸಲು ಪಕ್ಷದ ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ‘ಐತಿಹಾಸಿಕ ನಿರ್ಧಾರ’ ತೆಗೆದುಕೊಂಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ. ಇದು ಬಡವರ ವಿಮೋಚನೆ ದಿಶೆಯಲ್ಲಿ ‘‘ಶಕ್ತಿಶಾಲಿ ಹೆಜ್ಜೆ‘‘ ಎಂದು ಅವರು ಪ್ರತಿಪಾದಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಇಂಡಿಯಾ ಮೈತ್ರಿಕೂಟದ ಬಹುಪಾಲು ಪಕ್ಷಗಳು ಜಾತಿ ಗಣತಿಯನ್ನು ಬೆಂಬಲಿಸುತ್ತವೆ ಹಾಗೂ ಒತ್ತಾಯಿಸುತ್ತವೆ ಎಂದು ಭರವಸೆ ವ್ಯಕ್ತಪಡಿಸಿದರು.
ಒಂದು ವೇಳೆ ಯಾವುದೇ ಪಕ್ಷ ಭಿನ್ನಾಭಿಪ್ರಾಯ ಹೊಂದಿದ್ದರೆ, ಕಾಂಗ್ರೆಸ್ ಅದಕ್ಕೆ ಹೊಂದಿಕೊಳ್ಳುತ್ತದೆ. ಅದು ‘‘ಫ್ಯಾಸಿಸ್ಟ್ ಅಲ್ಲ’’ ಎಂದು ಅವರು ಹೇಳಿದ್ದಾರೆ.
ಪಕ್ಷದ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳಿಂದ ಸುತ್ತುವರಿದಿದ್ದ ರಾಹುಲ್ ಗಾಂಧಿ, ಜಾತಿ ಗಣತಿ ಬೆಂಬಲಿಸುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಣಯ ‘‘ತುಂಬಾ ಪ್ರಗತಿಪರ’’ ಹಾಗೂ ಬಡ ಜನರ ವಿಮೋಚನೆಯಲ್ಲಿ ‘‘ಶಕ್ತಿಯುತ ಹೆಜ್ಜೆ’’ ಎಂದರು.
ಜಾತಿ ಗಣತಿಯ ಕಲ್ಪನೆ ಕುರಿತು ಮಾತನಾಡಿದ ಅವರು, ದೇಶದಲ್ಲಿ ನೂತನ ಮಾದರಿ ಹಾಗೂ ಅಭಿವೃದ್ಧಿಗೆ ಈ ‘ಎಕ್ಸ್ ರೇ’ ಅಗತ್ಯವಾಗಿದೆ ಎಂದರು.
ಇದಕ್ಕಿಂತ ಮೊದಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಪಂಚ ರಾಜ್ಯಗಳ ವಿಧಾನ ಸಭೆ ಚುನಾವಣೆಯಲ್ಲಿ ಜಯ ಗಳಿಸಲು ಸಮನ್ವಯ, ಶಿಸ್ತು ಹಾಗೂ ಏಕತೆಯಿಂದ ಕಾರ್ಯ ನಿರ್ವಹಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.