ತಮಿಳುನಾಡಿಗೆ ಪ್ರತಿದಿನ 1 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ಸಿಡಬ್ಲ್ಯುಆರ್‌ಸಿ ಆದೇಶ
ಬೆಂಗಳೂರು : ತಮಿಳುನಾಡಿಗೆ ಜುಲೈ 31ರವರೆಗೆ ಬಿಳಿಗುಂಡ್ಲು ಜಲಾಶಯದಿಂದ ಪ್ರತಿ ದಿನ 1 ಟಿಎಂಸಿ ಅಡಿ (11,500 ಕ್ಯೂಸೆಕ್) ನೀರನ್ನು ಹರಿಸುವಂತೆ ಕಾವೇರಿ ಜಲ ನಿರ್ವಹಣಾ ಸಮಿತಿ (ಸಿಡಬ್ಲ್ಯು ಆರ್‌ಸಿ) ಗುರುವಾರ ಕರ್ನಾಟಕ ಸರಕಾರಕ್ಕೆ ಸೂಚಿಸಿದೆ.
ಆದರೆ ಕರ್ನಾಟಕವು ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದು, ತನ್ನ ಜಲಾಶಯಗಳಲ್ಲಿ ನೀರಿನ ಹರಿವಿನ ಕೊರತೆಯಿರುವುದರಿಂದ, ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳುವುದನ್ನು ಜುಲೈ 25ರವರೆಗೆ ಮುಂದೂಡುವಂತೆ ಸಿಡಬ್ಲ್ಯುಸಿಯನ್ನು ಕೋರಿದೆ.
ಗುರುವಾರ ದಿಲ್ಲಿಯಲ್ಲಿ ಸಭೆ ನಡೆಸಿದ ಸಿಡಬ್ಲ್ಯುಆರ್‌ಸಿ, ಜುಲೈ 12ರಿಂದ ಜುಲೈ 31ರವರೆಗೆ ಬಿಳಿಗುಂಡ್ಲುವಿನಲ್ಲಿ ಸಂಚಿತ ನೀರಿನ ಹರಿವು 1 ಟಿಎಂಸಿ ಅಡಿ ಇರುವಂತೆ ಕರ್ನಾಟಕವು ಖಾತರಿಪಡಿಸಿಕೊಳ್ಳಬೇಕು ಎಂದು ತಿಳಿಸಿದೆ.
ಕಳೆದ ಸಾಲಿನಲ್ಲಿ ಕರ್ನಾಟಕವು ಸರಿಯಾಗಿ ನೀರು ಹರಿಸಿಲ್ಲ. ಆದರೆ ಈ ಬಾರಿ ಮುಂಗಾರು ಸಾಮಾನ್ಯವಾಗಿದೆ. ಕಾವೇರಿ ಕಣಿವೆಯ ಅಣೆಕಟ್ಟುಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ಹೀಗಾಗಿ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಬೇಕೆಂದು ತಮಿಳುನಾಡಿನ ಅಧಿಕಾರಿಗಳು ಸಿಡಬ್ಲ್ಯು ಆರ್‌ಸಿಯನ್ನು ಆಗ್ರಹಿಸಿದ್ದರು.
ಇದಕ್ಕೆ ಪ್ರತಿಯಾಗಿ ಕರ್ನಾಟಕ ಕೂಡಾ ರಾಜ್ಯದಲ್ಲಿ ಮುಂಗಾರು ಸಾಮಾನ್ಯವಾಗಿಲ್ಲ. ಶೇ.28ರಷ್ಟು ಮಳೆಯ ಕೊರತೆಯಿದೆ. ಆದುದರಿಂದ ನೀರು ಬಿಡಲು ಸಾಧ್ಯವಿಲ್ಲವೆಂದು ವಾದಿಸಿತ್ತು.
ಎರಡೂ ರಾಜ್ಯಗಳ ವಾದ ಅಲಿಸಿದ ಸಿಡಬ್ಲ್ಯುಆರ್‌ಸಿ ತಮಿಳುನಾಡಿಗೆ ಜುಲೈ 31ರವರೆಗೆ ಪ್ರತಿ ದಿನ 1 ಟಿಎಂಸಿ ಅಡಿ ನೀರು ಬಿಡುಗಡೆಗೊಳಿಸಲು ಕರ್ನಾಟಕಕ್ಕೆ ಸೂಚಿಸಿತು.
2024ರ ಜೂನ್ 1ರಿಂದ 2024ರ ಜುಲೈ 9ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿನ ಒಟ್ಟಾರೆ ಹರಿವು 41.651 ಟಿಎಂಸಿಯಾಗಿದ್ದು, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ 28.71 ಶೇಕಡಷ್ಟು ಕೊರತೆಯಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಕಚೇರಿಯು ಗುರುವಾರ ಬಿಡುಗಡೆಗೊಳಿಸಿದ ಟಿಪ್ಪಣಿಯೊಂದು ತಿಳಿಸಿದೆ.
ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ ಪ್ರಸಕ್ತ 58.66 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಮೆಟ್ಟೂರಿನಿಂದ 4.905 ಟಿಎಂಸಿ ಅಡಿ ಹಾಗೂ ಭವಾನಿಯಿಂದ 0.618 ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗಿದೆ . ತಮಿಳುನಾಡಿನ ಮೂರು ಜಲಾಶಯಗಳಲ್ಲಿ ಒಟ್ಟಾರೆ 24.705 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ ಎಂದು ಕರ್ನಾಟಕ ತಿಳಿಸಿದೆ.