ತಮಿಳುನಾಡಿಗೆ ದಿನಂಪ್ರತಿ 3216 ಕ್ಯೂಸೆಕ್ ನೀರು ಬಿಡಲು ರಾಜ್ಯಕ್ಕೆ CWRC ಶಿಫಾರಸು
ಸಾಂದರ್ಭಿಕ ಚಿತ್ರ (Photo: PTI)
ಬೆಂಗಳೂರು : ಕರ್ನಾಟಕವು ಡಿಸೆಂಬರ್ ತಿಂಗಳ ಅಂತ್ಯದವರೆಗೂ ತಮಿಳುನಾಡಿಗೆ ದಿನಂಪ್ರತಿ 3216 ಕ್ಯೂಸೆಕ್ ನೀರನ್ನು ಬಿಡುಗಡೆಗೊಳಿಸಬೇಕೆಂದು ಕಾವೇರಿ ಜಲನಿಯಂತ್ರಣ ಸಮಿತಿ (CWRC) ಶಿಫಾರಸು ಮಾಡಿದೆ. ಮುಂದಿನ 30 ದಿನಗಳ ಕಾಲ ತನಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರನ್ನು ಕರ್ನಾಟಕವು ಬಿಡುಗಡೆಗೊಳಿಸಬೇಕೆಂದು ತಮಿಳುನಾಡು ಆಗ್ರಹಿಸಿತ್ತು.
ತಮಿಳುನಾಡಿಗೆ 3216 ಕ್ಯೂಸೆಕ್ ನೀರುಬಿಡಬೇಕೆಂಬ CWRCಯ ಶಿಫಾರಸನ್ನು ಕಾವೇರಿ ಜಲ ನಿರ್ವಹಣಾ ಸಮಿತಿ( CWMC)ಯು ದೃಢಪಡಿಸಬೇಕಾಗಿದೆ.
ನ.22ರವರೆಗೆ ತನ್ನ ನಾಲ್ಕು ಜಲಾಶಯಗಳಲ್ಲಿ ನೀರಿನ ಒಳಹರಿವಿನ ಪ್ರಮಾಣದಲ್ಲಿ 52.24 ಶೇಕಡ ಕೊರತೆಯಿರುವುದರಿಂದ ತಮಿಳುನಾಡಿಗೆ ನೀರು ಬಿಡುಗಡೆ ಅಸಾಧ್ಯವೆಂದು ಕರ್ನಾಟಕವು CWRCಗೆ ತಿಳಿಸಿತ್ತು. ಭಾರತೀಯ ಹವಾಮಾನ ಇಲಾಖೆಯ ವರದಿ ಪ್ರಕಾರ ತಮಿಳುನಾಡಿನಲ್ಲಿ ಅ. 15ರಿಂದ ಸಾಮಾನ್ಯ ಮಳೆಯಾಗಿದೆ. ಹಿಂಗಾರಿನಲ್ಲಿ ಕೂಡಾ ಕಾವೇರಿ ಜಲಾಯನ ಪ್ರದೇಶ ಹಾಗೂ ಮೆಟ್ಟೂರು ಅಣೆಕಟ್ಟಿನ ಕೆಳಗಿನ ಪ್ರದೇಶಗಳಲ್ಲಿ ಮಳೆ ಪರಿಸ್ಥಿತಿ ತೃಪ್ತಿಕರವಾಗಿರುವ ಸೂಚನೆಗಳು ಲಭ್ಯವಾಗಿವೆ ಎಂದು ಕರ್ನಾಟಕವು CWRCಗೆ ತಿಳಿಸಿತ್ತು.
ಸೆಪ್ಟೆಂಬರ್ ತಿಂಗಳ ಅಂತ್ಯದ ವೇಳೆಗೆ ಕುರುವೈ ಭತ್ತದ ಬೆಳೆಯನ್ನು ಕಟಾವು ಮಾಡಲಾಗುತ್ತದೆ. ಆದುದರಿಂದ ಆ ಬೆಳೆಗೆ ನೀರಿನ ಅಗತ್ಯವಿರುವುದಿಲ್ಲ ಹಾಗೂ ಸಾಂಬಾ ಬೆಳೆಯು ಫಸಲಿನ ಹಂತಕ್ಕೆ ಬಂದಿದ್ದು, ಡಿಸೆಂಬರ್ ತಿಂಗಳೊಳಗೆ ಅದನ್ನು ಕಟಾವು ಮಾಡಲಾಗುತ್ತದೆ ಎಂದು ಕರ್ನಾಟಕವು ತನ್ನ ಮನವಿಯಲ್ಲಿ ತಿಳಿಸಿದೆ.
ತನ್ನ ರಾಜ್ಯದ ನಾಲ್ಕು ಜಲಾಶಯಗಳಲ್ಲಿ ನೀರಿನ ಒಳಹರಿವಿನ ಪ್ರಮಾಣವು ನೀರಾವರಿಗೆ, ಕುಡಿಯಲು ಹಾಗೂ ಇತರ ಮನೆಬಳಕೆಯ ಅವಶ್ಯಕತೆಗಳನ್ನು ಈಡೇರಿಸಲು ಸಾಕಾಗದು. ಆದುದರಿಂದ ರಾಜ್ಯವು ತನ್ನ ಜಲಾಶಯಗಳಿಂದ ನೀರನ್ನು ತಮಿಳುನಾಡಿಗೆ ಬಿಡುಗಡೆಗೊಳಿಸಲು ಸಾಧ್ಯವಾಗದು ಎಂದು ಕರ್ನಾಟಕವು CWRCಗೆ ತಿಳಿಸಿತ್ತು.
ತನ್ನ ರಾಜ್ಯದ ಜಲಾಶಯಗಳಿಂದ ತಮಿಳುನಾಡಿಗೆ ನೀರನ್ನು ಬಿಡುಗಡೆಗೊಳಿಸುವಂತೆ ತನಗೆ ನಿರ್ದೇಶನ ನೀಡಬಾರದೆಂದು ಕರ್ನಾಟಕ ಸರಕಾರವು CWRC ಯನ್ನು ಕೋರಿತ್ತು. ಆದರೆ ಮುಂದಿನ 30 ದಿನಗಳವರೆಗೆ ಕರ್ನಾಟಕವು ತನಗೆ 5 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆಗೊಳಿಸಬೇಕೆಂದು ತಮಿಳುನಾಡು ಆಗ್ರಹಿಸಿತ್ತು.
ಉಭಯ ರಾಜ್ಯಗಳ ವಾದವನ್ನು ಪರಿಶೀಲಿಸಿರುವ CWRCಯು, ಸುಪ್ರೀಂಕೋರ್ಟ್ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ತೀರ್ಪನ್ನು ಸುಧಾರಣೆಗೊಳಿಸಿ ನೀಡಿದ ಆದೇಶದ ಪ್ರಕಾರ ಕರ್ನಾಟಕವು ನವೆಂಬರ್ 2023 ಹಾಗೂ ಡಿಸೆಂಬರ್ 2023ರ ನಡುವಿನ ಅವಧಿಯಲ್ಲಿ ಬಿಳಿಗುಂಡ್ಲುವಿಗೆ ನವೆಂಬರ್ 24ರಿಂದ ಡಿಸೆಂಬರ್ 31ರರೆಗೆ (38 ದಿನಗಳು) ದಿನಂಪ್ರತಿ 3216 ಕ್ಯೂಸೆಕ್ ನೀರನ್ನು ಬಿಡುಗಡೆಗೊಳಿಸಬೇಕೆಂದು ಶಿಫಾರಸು ಮಾಡಿದೆ.