ನಕಲಿ ಆಯುರ್ವೇದ ಉತ್ಪನ್ನಗಳ ಜಾಹೀರಾತುಗಳನ್ನು ಒಳಗೊಂಡಿರುವ ಸೈಬರ್ ವಂಚನೆ: ದಿಲ್ಲಿ ಪೊಲೀಸರಿಂದ ತನಿಖೆ
ಸಾಂದರ್ಭಿಕ ಚಿತ್ರ | PTI
ಹೊಸ ದಿಲ್ಲಿ: ಆಯುರ್ವೇದ ಉತ್ಪನ್ನಗಳ ಮಾರಾಟ ಸಂಸ್ಥೆಯೊಂದರ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಡೆದಿರುವ ಸೈಬರ್ ವಂಚನೆ ಪ್ರಕರಣವೊಂದರ ತನಿಖೆಯನ್ನು ದಿಲ್ಲಿ ಪೊಲೀಸರು ಕೈಗೆತ್ತಿಕೊಂಡಿದ್ದಾರೆ.
ಕೆಲವು ವಂಚಕರು ತಮ್ಮ ಬ್ರಾಂಡ್ ನ ಜಾಹೀರಾತು ವಿಡಿಯೊವೊಂದನ್ನು ಬಳಸುತ್ತಿದ್ದಾರೆ ಎಂದು ಸನ್ಯಾಸಿ ಆಯುರ್ವೇದ ಸಂಸ್ಥೆಯ ನಿರ್ದೇಶಕರೊಬ್ಬರು ಆರೋಪಿಸಿರುವ ಹಿನ್ನೆಲೆಯಲ್ಲಿ ಈ ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮಾಹಿತಿ ವರದಿಯಲ್ಲಿ ಹೇಳಲಾಗಿದೆ.
ಯಾವುದೇ ಅನುಮತಿ ಪಡೆಯದೆ ನಕಲಿ ಆಯುರ್ವೇದ ಉತ್ಪನ್ನಗಳನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡಲು ನಮ್ಮ ಕಂಪನಿಯ ಹೆಸರು ಹಾಗೂ ವಿಡಿಯೊಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಹೀಗಾಗಿ, ಪೊಲೀಸರನ್ನು ಸಂಪರ್ಕಿಸಿದ್ದೇವೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ದೂರುದಾರರು ತಿಳಿಸಿದ್ದಾರೆ.
ಈ ಸಂಬಂಧ ಕಳೆದ ವರ್ಷದ ಡಿಸೆಂಬರ್ 27ರಂದು ಪೊಲೀಸರು ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡಿದ್ದಾರೆ.
“ಒಂದು ಜಾಲ/ಗುಂಪು ಹಣ ಮಾಡುವ ದುರುದ್ದೇಶದಿಂದ ನಕಲಿ ಔಷಧಿಗಳನ್ನು ಮಾರಾಟ ಮಾಡುತ್ತಿದ್ದು, ಸಂಘಟಿತ ಅಪರಾಧ, ವಂಚನೆ ಹಾಗೂ ಫೋರ್ಜರಿಯಲ್ಲಿ ತೊಡಗಿದೆ. ಇದರಿಂದ, ಸಾವಿರಾರು ಜೀವಗಳಿಗೆ ಹಾನಿಯಾಗುವ ರೂಪದಲ್ಲಿ ಸಮಾಜಕ್ಕೆ ದೊಡ್ಡ ಬೆದರಿಕೆ ಒಡ್ಡುತ್ತಿದ್ದಾರೆ” ಎಂದು ಪ್ರಾಥಮಿಕ ಮಾಹಿತಿ ವರದಿಯಲ್ಲಿ ಆರೋಪಿಸಲಾಗಿದೆ.
ನಮ್ಮದು ವಿಶ್ವವಿಖ್ಯಾತ ಬ್ರಾಂಡ್ ಆಗಿದ್ದು, ಭಾರತ ಮತ್ತು ವಿಶ್ವಾದ್ಯಂತ ಗಮನಾರ್ಹ ಸಂಖ್ಯೆಯ ಗ್ರಾಹಕರ ನೆಲೆಯನ್ನು ಹೊಂದಿದೆ ಎಂದು ದೂರುದಾರರು ಹೇಳಿಕೊಂಡಿದ್ದಾರೆ.