ತೆಲಂಗಾಣ : ಸೈಬರ್ ಕ್ರೈಮ್ ಪೊಲೀಸರಿಂದ ಬಂಧಿತ ಆರೋಪಿ ಕಸ್ಟಡಿಯಲ್ಲಿ ಮೃತ್ಯು
ಪೊಲೀಸ್ ದೌರ್ಜನ್ಯದಿಂದ ಸಾವು ಎಂದ ಕುಟುಂಬ

ಸಾಂದರ್ಭಿಕ ಚಿತ್ರ (credit: Grok)
ಹೈದರಾಬಾದ್ : ತೆಲಂಗಾಣದಿಂದ ಆಗ್ನೇಯ ಏಷ್ಯಾದ ದೇಶಗಳಿಗೆ ಉದ್ಯೋಗ ಕೊಡಿಸುವ ನೆಪದಲ್ಲಿ ನಿರುದ್ಯೋಗಿ ಯುವಕರನ್ನು ಕಳ್ಳಸಾಗಣೆ ಮಾಡಿ ಸೈಬರ್ ವಂಚನೆಗೆ ಒತ್ತಾಯಿಸಿದ ಪ್ರಕರಣದ ಆರೋಪಿಯೋರ್ವ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾನೆ. ಆದರೆ, ಆತ ಪೊಲೀಸ್ ದೌರ್ಜನ್ಯದಿಂದ ಮೃತಪಟ್ಟಿರುವ ಬಗ್ಗೆ ಆತನ ಕುಟುಂಬವು ಆರೋಪಿಸಿದೆ.
ಅಲಕುಂಟಾ ಸಂಪತ್ ಮೃತಪಟ್ಟವರು. ನಿಝಾಮಾಬಾದ್ ಸೈಬರ್ ಕ್ರೈಂ ಪೊಲೀಸರು ಸಂಪತ್ ನನ್ನು ಬಂಧಿಸಿದ್ದರು. ಈತ ನಿರುದ್ಯೋಗಿ ಗ್ರಾಮೀಣ ಯುವಕರನ್ನು ಥೈಲ್ಯಾಂಡ್, ಮ್ಯಾನ್ಮಾರ್ ಮತ್ತು ಲಾವೋಸ್ಗೆ ಉದ್ಯೋಗದ ಭರವಸೆ ನೀಡಿ ಕರೆದೊಯ್ದು ಅಲ್ಲಿ ಅವರನ್ನು ಸೈಬರ್ ಗುಲಾಮಗಿರಿಗೆ ಒತ್ತಾಯಿಸುತ್ತಿದ್ದ ಎಂದು ಆರೋಪಿಸಲಾಗಿತ್ತು.
ಸಂಪತ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ, ಐಟಿ ಕಾಯ್ದೆ ಮತ್ತು ವಲಸೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಂಗ ಬಂಧನದ ನಂತರ ಸಂಪತ್ನನ್ನು ಮತ್ತೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಸಂಪತ್ ವಿಚಾರಣೆ ವೇಳೆ ಸೈಬರ್ ವಂಚನೆ ಜಾಲದಲ್ಲಿ ತನ್ನ ಕೈವಾಡವನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಆದರೆ, ಸಂಪತ್ ಕುಟುಂಬವು ಪೊಲೀಸ್ ದೌರ್ಜನ್ಯದ ಬಗ್ಗೆ ಆರೋಪಿಸಿದೆ. ʼಮಾರ್ಚ್ 13ರ ಸಂಜೆ ಸಂಪತ್ ನನ್ನು ಭೇಟಿಯಾದಾಗ, ಪೊಲೀಸರು ಕಾಲಿನ ಮೇಲೆ ಲಾಠಿಯಿಂದ ಹಲ್ಲೆ ನಡೆಸಿದ್ದಾರೆ, ನನಗೆ ಚಿತ್ರಹಿಂಸೆ ಕೊಡುತ್ತಿದ್ದು, ಸಹಿಸಲಾಗುತ್ತಿಲ್ಲ ಎಂದು ಹೇಳಿದರು. ಅವರು ನಡೆಯಲು ಕಷ್ಟಪಡುತ್ತಿದ್ದರುʼ ಸಂಪತ್ ಸಹೋದರ ಹೇಳಿದರು.
ಈ ಕುರಿತು ನಿಝಾಮಾಬಾದ್ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಘಟನೆ ಕುರಿತು ಮಾನವ ಹಕ್ಕುಗಳ ಆಯೋಗಕ್ಕೂ ಮಾಹಿತಿ ನೀಡಲಾಗಿದೆ. ದೌರ್ಜನ್ಯದ ಆರೋಪ ಕೇಳಿ ಬಂದ ಹಿನ್ನೆಲೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ.