ಫೆಂಗಲ್ ಚಂಡಮಾರುತ ನಾಳೆ ತಮಿಳುನಾಡು, ಪುದುಚೇರಿ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ
PC : PTI
ಚೆನ್ನೈ : ನೈರುತ್ಯ ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತವು ಶುಕ್ರವಾರ ಅಪರಾಹ್ನ ಚಂಡಮಾರುತವಾಗಿ ರೂಪುಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯು ತಿಳಿಸಿದೆ.
‘ಫೆಂಗಲ್(ಫೀಂಜಲ್ ಎಂದು ಉಚ್ಚಾರಣೆ)’ ಎಂದು ಹೆಸರಿಸಲಾಗಿರುವ ಚಂಡಮಾರುತವು ನ.30ರಂದು ಅಪರಾಹ್ನ ಪ್ರತಿ ಗಂಟೆಗೆ 90 ಕಿ.ಮೀ.ವರೆಗೆ ವೇಗದ ಗಾಳಿಯೊಂದಿಗೆ ಪುದುಚೇರಿ ಸಮೀಪದಲ್ಲಿ ಅಪ್ಪಳಿಸುವ ಸಾಧ್ಯತೆಯಿದೆ.
ಇಂದು ಗಂಟೆಗೆ 10 ಕಿ.ಮೀ.ವೇಗದಲ್ಲಿ ಉತ್ತರ ವಾಯುವ್ಯದತ್ತ ಚಲಿಸುತ್ತಿರುವ ಚಂಡಮಾರುತವು ಶನಿವಾರ ಅಪರಾಹ್ನ ಕಾರೈಕಲ್ ಮತ್ತು ಮಹಾಬಲಿಪುರಂ ತೀರಗಳ ನಡುವೆ ತಮಿಳುನಾಡು ಮತ್ತು ಪುದುಚೇರಿ ಕರಾವಳಿಗಳನ್ನು ದಾಟಲಿದೆ. ತಮಿಳುನಾಡು ಮತ್ತು ಪುದುಚೇರಿಗಳ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಇಲ್ಲಿನ ಪ್ರಾದೇಶಿಕ ಹವಾಮಾನ ಕೇಂದ್ರದ ಮುಖ್ಯಸ್ಥ ಎಸ್.ಬಾಲಚಂದ್ರನ್ ತಿಳಿಸಿದರು.
ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದ್ದು, ಜಾಗ್ರತರಾಗಿರುವಂತೆ ಮತ್ತು ಸನ್ನದ್ಧರಾಗಿರುವಂತೆ ಕರಾವಳಿ ನಿವಾಸಿಗಳಿಗೆ ಸೂಚಿಸಲಾಗಿದೆ. ಭಾರೀ ಮಳೆಯ ಸಂದರ್ಭದಲ್ಲಿ ಪ್ರಯಾಣ ಕೈಗೊಳ್ಳದಂತೆ ಸಲಹೆ ನೀಡಲಾಗಿದೆ.
4,153 ದೋಣಿಗಳು ತೀರಕ್ಕೆ ಮರಳಿದ್ದು, ಅಗತ್ಯವಾದರೆ ಬಳಕೆಗಾಗಿ 2,229 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. 164 ಕುಟುಂಬಗಳ ಒಟ್ಟು 471 ಜನರನ್ನು ಈಗಾಗಲೇ ತಿರುವಾವೂರು ಮತ್ತು ನಾಗಪಟ್ಟಿನಂ ಜಿಲ್ಲೆಗಳಲ್ಲಿಯ ಆರು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ತಮಿಳುನಾಡು ಮತ್ತು ಪುದುಚೇರಿ ವಿಪತ್ತು ಪ್ರತಿಕ್ರಿಯಾ ಶಿಷ್ಟಾಚಾರಗಳನ್ನು ಸಕ್ರಿಯಗೊಳಿಸಿದ್ದು,ಎನ್ಡಿಆರ್ಎಫ್ನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ.