ಫೆಂಗಲ್ ಚಂಡಮಾರುತ | ಕೇರಳದಲ್ಲಿ ರೆಡ್ ಅಲರ್ಟ್
PC : ANI
ತಿರುವನಂತಪುರ : ಪ್ರಸ್ತುತ ಉತ್ತರ ತಮಿಳುನಾಡಿನಲ್ಲಿ ಸ್ಥಿತಗೊಂಡಿರುವ ಫೆಂಗಲ್ ಚಂಡಮಾರುತವು ಬಿರುಸುಗೊಂಡಿರುವುದರಿಂದ ಕೇರಳದಲ್ಲಿ ವ್ಯಾಪಕ ಮಳೆಯ ಎಚ್ಚರಿಕೆಯನ್ನು ನೀಡಿರುವ ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯು ಸೋಮವಾರ ರಾಜ್ಯದ ಐದು ಜಿಲ್ಲೆಗಳಿಗಾಗಿ ರೆಡ್ ಅಲರ್ಟ್ ಹೊರಡಿಸಿದೆ.
ಡಿ.3ರಂದು ಉತ್ತರ ಕೇರಳ ಮತ್ತು ಕರ್ನಾಟಕದ ಮೂಲಕ ಅರಬ್ಬಿ ಸಮುದ್ರದತ್ತ ಚಲಿಸುತ್ತಿದ್ದಂತೆ ಚಂಡಮಾರುತವು ತೀವ್ರ ಸ್ವರೂಪವನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿರುವ ಐಎಂಡಿ ಕಾಸರಗೋಡು, ಕಣ್ಣೂರು, ವಯನಾಡ್, ಕೋಝಿಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಿಗೆ ರೆಡ್ ಅಲರ್ಟ್, ಪಾಲಕ್ಕಾಡ್, ತ್ರಿಶೂರು ಮತ್ತು ಎರ್ನಾಕುಲಂ ಜಿಲ್ಲೆಗಳಿಗೆ ಆರೇಂಜ್ ಅಲರ್ಟ್ ಹಾಗೂ ಕೊಟ್ಟಾಯಂ, ಅಲಪ್ಪುಳ ಹಾಗೂ ಪಟ್ಟಣಂತಿಟ್ಟ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಹೊರಡಿಸಿದೆ.
ಸೋಮವಾರದಿಂದ ಮಂಗಳವಾರದವರೆಗೆ ರಾಜ್ಯದ ಉತ್ತರ ಮತ್ತು ಮಧ್ಯ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ, ಆಗಾಗ್ಗೆ ಗುಡುಗು-ಸಿಡಿಲಿನೊಂದಿಗೆ ಮಧ್ಯಮ ಪ್ರಮಾಣದಲ್ಲಿ ಮಳೆ ಮುಂದಿನ ಐದು ದಿನಗಳ ಕಾಲ ಮುಂದುವರಿಯುವ ನಿರೀಕ್ಷೆಯಿದೆ ಎಂದು ಅದು ತಿಳಿಸಿದೆ.
ರಾಜ್ಯದ ಕಂದಾಯ ಸಚಿವ ಕೆ.ರಾಜನ್ ಅವರು,ಉತ್ತರ ಕೇರಳದಲ್ಲಿ ಮಳೆಯು ತೀವ್ರಗೊಳ್ಳುವ ಸಾಧ್ಯತೆಯಿರುವುದರಿಂದ ಜಾಗ್ರತರಾಗಿರುವಂತೆ ಜನರನ್ನು ಆಗ್ರಹಿಸಿದ್ದಾರೆ.
ಕಾಸರಗೋಡು ಜಿಲ್ಲಾಡಳಿತವು ಮಂಗಳವಾರ ಎಲ್ಲ ಶಾಲೆಕಾಲೇಜುಗಳಿಗೆ ರಜೆಯನ್ನು ಘೋಷಿಸಿದೆ. ಆದರೆ ಮಾದರಿ ಸನಿವಾಸ ಶಾಲೆಗಳು ಕಾರ್ಯ ನಿರ್ವಹಿಸಲಿವೆ ಎಂದು ಅದು ಸ್ಪಷ್ಟಪಡಿಸಿದೆ.
ಸೋಮವಾರ ಪಟ್ಟಣಂತಿಟ್ಟ,ಇಡುಕ್ಕಿ,ಕೊಟ್ಟಾಯಂ ಮತ್ತು ವಯನಾಡ ಜಿಲ್ಲೆಗಳಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.