ತಮಿಳುನಾಡಿನತ್ತ ಧಾವಿಸುತ್ತಿರುವ ಚಂಡಮಾರುತ ‘ಫೆಂಗಲ್’ | ಭಾರೀ ಮಳೆಯ ಎಚ್ಚರಿಕೆ
PC : PTI
ಹೊಸದಿಲ್ಲಿ : ಬಂಗಾಳ ಕೊಲ್ಲಿಯ ನೈರುತ್ಯ ಭಾಗದಲ್ಲಿ ರೂಪುಗೊಂಡಿರುವ ವಾಯುಭಾರ ಕುಸಿತವು ತೀವ್ರಗೊಂಡಿದ್ದು, ಅದು ಬುಧವಾರ ‘ಫೆಂಗಲ್’ ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಮ್ಡಿ) ಎಚ್ಚರಿಸಿದೆ. ಚಂಡಮಾರುತವು ಮುಂದಿನ ಎರಡು ದಿನಗಳಲ್ಲಿ ತಮಿಳುನಾಡು ಕರಾವಳಿಯತ್ತ ಮುಂದುವರಿಯಲಿದೆ ಎಂಬ ಮುನ್ನೆಚ್ಚರಿಕೆಯನ್ನು ಅದು ನೀಡಿದೆ.
ತೀವ್ರ ವಾಯುಭಾರ ಕುಸಿತವು ಮಂಗಳವಾರ ಟ್ರಿಂಕೋಮಲಿಯ ಆಗ್ನೇಯಕ್ಕೆ 310 ಕಿ.ಮೀ., ನಾಗಪಟ್ಟಿಣಂನಿಂದ ದಕ್ಷಿಣ-ಆಗ್ನೇಯಕ್ಕೆ 590 ಕಿ.ಮೀ., ಪುದುಚೇರಿಯಿಂದ ದಕ್ಷಿಣ-ಆಗ್ನೇಯಕ್ಕೆ 710 ಕಿ.ಮೀ. ಮತ್ತು ಚೆನ್ನೈಯಿಂದ ದಕ್ಷಿಣ-ಆಗ್ನೇಯಕ್ಕೆ 800 ಕಿ.ಮೀ. ದೂರದಲ್ಲಿ ಕೇಂದ್ರೀಕೃತವಾಗಿದೆ.
‘‘ತೀವ್ರ ವಾಯುಭಾರ ಕುಸಿತವು ಉತ್ತರ-ವಾಯುವ್ಯದತ್ತ ಮುಂದುವರಿದು ನವೆಂಬರ್ 27ರಂದು ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆಯಿದೆ. ಬಳಿಕ, ಮುಂದಿನ ಎರಡು ದಿನಗಳಲ್ಲಿ ಅದು ಉತ್ತರ-ವಾಯುವ್ಯದತ್ತ ಮುಂದುವರಿದು ತಮಿಳುನಾಡು ಮತ್ತು ಶ್ರೀಲಂಕಾ ಕರಾವಳಿಯತ್ತ ಮುಂದುವರಿಯಲಿದೆ. ಚಂಡಮಾರುತದ ಚಲನೆ ಮತ್ತು ತೀವ್ರತೆಯ ಮೇಲೆ ನಿರಂತರ ನಿಗಾ ಇಡಲಾಗುತ್ತಿದೆ’’ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ತಿಳಿಸಿದೆ.
ಇದರ ಪರಿಣಾಮವಾಗಿ ಬುಧವಾರ ತಮಿಳುನಾಡು ಮತ್ತು ಪುದುಚೇರಿಯ ಕೆಲವು ಸ್ಥಳಗಳಲ್ಲಿ ಅತ್ಯಂತ ಭಾರೀ ಮಳೆ ಮತ್ತು ಗುರುವಾರ ಕೆಲವು ಸ್ಥಳಗಳಲ್ಲಿ ಅತ್ಯಂತ ಭಾರೀ ಮಳೆ ಹಾಗೂ ಶುಕ್ರವಾರ ಚದುರಿದಂತೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.