ಇಂದು ತಮಿಳುನಾಡಿಗೆ ಅಪ್ಪಳಿಸಲಿರುವ ಫೆಂಗಲ್ ಚಂಡಮಾರುತ: ಭಾರಿ ಮಳೆ; 10ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು
Photo: PTI
ಚೆನ್ನೈ: ಫೆಂಗಲ್ ಚಂಡಮಾರುತ ತಮಿಳುನಾಡಿನ ಕರಾವಳಿ ಪ್ರದೇಶವನ್ನು ಸಮೀಪಿಸಿರುವುದರಿಂದ, ಚೆನ್ನೈ ಹಾಗೂ ನೆರೆಯ ಪುದುಚೇರಿ ಸೇರಿದಂತೆ ತಮಿಳುನಾಡಿನ ಹಲವಾರು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ. ಶನಿವಾರ ಸಂಜೆ ಫೆಂಗಲ್ ಚಂಡಮಾರುತ ತಮಿಳುನಾಡನ್ನು ಅಪ್ಪಳಿಸುವ ಸಾಧ್ಯತೆ ಇದ್ದು, ಕರೈಕಲ್ ಹಾಗೂ ಪುದುಚೇರಿ ಬಳಿಯ ಮಹಾಬಲಿಪುರಂ ನಡುವೆ ಚಂಡಮಾರುತ ಅಪ್ಪಳಿಸಲಿದೆ ಎಂದು ಹೇಳಲಾಗಿದೆ. ಭಾರಿ ಮಳೆಯಿಂದಾಗಿ ದೈನಂದಿನ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಚಂಡಮಾರುತದಿಂದ ಚೆನ್ನೈ ವಿಮಾನ ನಿಲ್ದಾಣದಲ್ಲಿನ ವಿಮಾನ ಕಾರ್ಯಾಚರಣೆ ಹಾಗೂ ಸ್ಥಳೀಯ ರೈಲು ಸೇವೆಗಳ ಮೇಲೂ ಪ್ರತಿಕೂಲ ಪರಿಣಾಮವುಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ಚೆನ್ನೈ ವಿಮಾನ ನಿಲ್ದಾಣದಿಂದ ನಿರ್ಗಮನ ಹಾಗೂ ಆಗಮನ ಮಾಡಬೇಕಿದ್ದ 10ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಗೊಂಡಿದೆ. ತನ್ನ ಎಲ್ಲ ಆಗಮನ ಮತ್ತು ನಿರ್ಗಮನ ವಿಮಾನಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಎಂದು ಇಂಡಿಗೊ ವಿಮಾನ ಯಾನ ಸಂಸ್ಥೆ ಪ್ರಕಟಿಸಿದೆ. ಪ್ರತಿಕೂಲ ಹವಾಮಾನದಿಂದಾಗಿ, ಅಬು ಧಾಬಿಯಿಂದ ಚೆನ್ನೈಗೆ ಆಗಮಿಸುತ್ತಿದ್ದ ಇಂಡಿಗೊ ವಿಮಾನ(6E1412)ದ ಮಾರ್ಗವನ್ನು ಬೆಂಗಳೂರಿಗೆ ಬದಲಿಸಲಾಗಿದೆ.
ಭಾರಿ ಮಳೆಯಿಂದಾಗಿ ಚೆನ್ನೈ ವಲಯದ ಎಲ್ಲ ಉಪನಗರ ವಿಭಾಗಗಳ ಸ್ಥಳೀಯ ರೈಲುಗಳ ಕಾರ್ಯಾಚರಣೆಯನ್ನು ಕಡಿತಗೊಳಿಸಲಾಗಿದೆ.
ಚೆನ್ನೈ, ತಿರುವಳ್ಳೂರ್, ಕಾಂಚೀಪುರಂ ಹಾಗೂ ಚೆಂಗಲ್ ಪಟ್ಟು ಜಿಲ್ಲೆಗಳಲ್ಲಿನ ಎಲ್ಲ ಶಾಲಾ ಕಾಲೇಜುಗಳಿಗೆ ಇಂದು ತಮಿಳುನಾಡು ಸರಕಾರ ರಜೆ ಘೋಷಿಸಿದೆ. ಇಂದು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ಅವಕಾಶ ನೀಡಬೇಕು ಎಂದೂ ಐಟಿ ಕಂಪನಿಗಳಿಗೆ ತಮಿಳುನಾಡು ಸರಕಾರ ಸಲಹೆ ನೀಡಿದೆ.
ಚೆನ್ನೈ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಾದ ಚೆಂಗಲ್ ಪೇಟ್, ಕಾಂಚೀಪುರಂ, ತಿರುವಳ್ಳೂರ್ ಜಿಲ್ಲೆಗಳು ಸೇರಿದಂತೆ ನದಿ ಪಾತ್ರದ ಜಿಲ್ಲೆಗಳಾದ ಮಾಯಿಲದುತುರೈ, ನಾಗಪ್ಪಟಿನಂ ಮತ್ತು ತಿರುವರೂರ್ ಜಿಲ್ಲೆಗಳಲ್ಲೂ ಇಂದು ಬೆಳಗ್ಗೆಯಿಂದ ವ್ಯಾಪಕ ಮಳೆಯಾಗುತ್ತಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಪೂರ್ವ ಕರಾವಳಿ ರಸ್ತೆ ಹಾಗೂ ಹಳೆಯ ಮಹಾಬಲಿಪುರಂ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕ ಸಾರಿಗೆ ಸೇವೆಗಳನ್ನೂ ಅಮಾನತುಗೊಳಿಸಲಾಗಿದೆ.