ಆಂಧ್ರ, ತಮಿಳುನಾಡು ಕರಾವಳಿಗೆ ಅಪ್ಪಳಿಸಲಿರುವ 'ಮಿಚಾಂಗ್' ಚಂಡಮಾರುತ
Photo source: PTI
ಚೆನ್ನೈ, ಡಿ.3: ಬಂಗಾಳ ಕೊಲ್ಲಿ ಮತ್ತು ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ರೂಪುಗೊಂಡಿರುವ ಚಂಡಮಾರುತ 'ಮಿಚಾಂಗ್' ಪ್ರಬಲಗೊಳ್ಳುತ್ತಿದ್ದು, ಆಂಧ್ರ ಪ್ರದೇಶ ಮತ್ತು ತಮಿಳುನಾಡು ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತದ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಚೆನ್ನೈ ಮೇಲೆ ಇದರ ಪರಿಣಾಮ ಕಡಿಮೆ ಎಂದು ಅಂದಾಜಿಸಲಾಗಿದ್ದು, ನೆಲ್ಲೋರ್ ಮತ್ತು ಮಚಲಿಪಟ್ಟಣಂ ಪ್ರದೇಶದಲ್ಲಿ ಅಪ್ಪಳಿಸಲಿದೆ ಎಂದು ಇಲಾಖೆ ಅಂದಾಜಿಸಿದೆ. ಮಂಗಳವಾರ ಮುಂಜಾನೆ ವೇಳಗೆ 100 ಕಿಲೋಮೀಟರ್ ವೇಗದವರೆಗೂ ಬಲವಾದ ಗಾಳಿ ಬೀಸಲಿದೆ.
ಈ ಚಂಡಮಾರುತ ಮುಂದಿನ 24 ಗಂಟೆಗಳ ಅವಧಿಯಲ್ಲಿ ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ತೀವ್ರಗೊಳ್ಳಲಿದೆ. ಪಶ್ಚಿಮ-ಕೇಂದ್ರ ಬಂಗಾಳ ಕೊಲ್ಲಿ ಹಾಗೂ ದಕ್ಷಿಣ ಆಂಧ್ರ ಪ್ರದೇಶದ ಹಾಗೂ ತಮಿಳುನಾಡಿನ ಕರಾವಳಿ ಪ್ರದೇಶಕ್ಕೆ ಡಿಸೆಂಬರ್ 4ರ ವೇಳೆಗೆ ತಲುಪುವ ನಿರೀಕ್ಷೆ ಇದೆ.
ಈ ಹಿನ್ನೆಲೆಯಲ್ಲಿ ಪುದುಚೇರಿ ಸರಕಾರ ಪುದುಚೇರಿ, ಕರೈಕಲ್ ಮತ್ತು ಯೆನಾಮ್ ಪ್ರದೇಶದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ. ವಿಶಾಖಪಟ್ಟಣಂ ಚಂಡಮಾರುತ ಮುನ್ನೆಚ್ಚರಿಕೆ ಕೇಂದ್ರದ ನಿರ್ದೇಶಕಿ ಸುನಂದಾ ಈ ಬಗ್ಗೆ ವಿವರ ನೀಡಿ, "ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಚಂಡಮಾರುತವಾಗಿ ರೂಪುಗೊಂಡು ಪುದುಚೇರಿ, ಚೆನ್ನೈ, ನೆಲ್ಲೋರ್, ಬಪ್ಟಾಲಾ ಪ್ರದೇಶವನ್ನು ಪ್ರವೇಶಿಸಲಿದೆ ಎಂದು ವಿವರಿಸಿದ್ದಾರೆ.