ಕೆಲವೇ ಗಂಟೆಗಳಲ್ಲಿ ಆಂಧ್ರ ಪ್ರದೇಶಕ್ಕೆ ಅಪ್ಪಳಿಸಲಿರುವ ಮಿಚಾಂಗ್ ಚಂಡಮಾರುತ
ಚೆನ್ನೈನಲ್ಲಿ ಭಾರಿ ಮಳೆಗೆ 8 ಮಂದಿ ಮೃತ್ಯು
Photo: PTI
ಹೈದರಾಬಾದ್/ಚೆನ್ನೈ: ಮಂಗಳವಾರ ಬೆಳಗ್ಗೆ 11 ಗಂಟೆಯ ವೇಳೆಗೆ ಆಂಧ್ರಪ್ರದೇಶದ ಬಾಪಟ್ಲಾಕ್ಕೆ ತೀರಾ ಸನಿಹವಿರುವ ನೆಲ್ಲೂರು ಹಾಗೂ ಮಚಲಿಪಟ್ಟಣಂ ನಡುವೆ ಮಿಚಾಂಗ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಆಂಧ್ರಪ್ರದೇಶ, ಪುದುಚೆರಿ ಹಾಗೂ ತಮಿಳುನಾಡಿನ ವಿವಿಧ ಪ್ರದೇಶಗಳಲ್ಲಿ ಕಳೆದ ಕೆಲವು ಗಂಟೆಗಳ ಹಿಂದೆ ಭಾರಿ ಮಳೆಯಾಗಿದೆ ಎಂದು indiatoday.in ವರದಿ ಮಾಡಿದೆ.
ಸೋಮವಾರ ಚೆನ್ನೈನಲ್ಲಿ ಸುರಿದ ಭಾರಿ ಮಳೆಯಿಂದಾಗಿ, ರಸ್ತೆಗಳು ನದಿಯಂತಾಗಿದ್ದು, ಮಳೆಯ ನೀರಿನಲ್ಲಿ ವಾಹನಗಳ ಕೊಚ್ಚಿ ಹೋಗಿದ್ದರಿಂದ ಪ್ರಾಧಿಕಾರಗಳು ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಬೇಕಾದ ಅನಿವಾರ್ಯತೆಗೆ ಸಿಲುಕಿದವು. ಪರಿಸ್ಥಿತಿಯು ಸುಧಾರಿಸುವವರೆಗೂ ಮನೆಯಿಂದಲೇ ಕಾರ್ಯನಿರ್ವಹಿಸಿ ಎಂದು ಖಾಸಗಿ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಸೂಚಿಸಿವೆ. ಭಾರಿ ಗಾಳಿಯೊಂದಿಗೆ ಮಳೆ ಸುರಿದಿದ್ದರಿಂದ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿದವು. ಮಳೆ ಸಂಬಂಧಿತ ಅವಘಡಗಳಿಂದಾಗಿ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ.
ಪ್ರವಾಹದ ನೀರು ಸರ್ಕಾರಿ ಆಸ್ಪತ್ರೆಗಳ ಒಳಗೆ ನುಗ್ಗಿದ್ದರಿಂದ ಕೆಲ ಸಮಯ ತಾತ್ಕಾಲಿಕವಾಗಿ ಆರೋಗ್ಯ ಸೇವೆಗಳನ್ನು ಅಮಾನತುಗೊಳಿಸಬೇಕಾಗಿ ಬಂದಿತು. ಇದಲ್ಲದೆ ಮೆಟ್ರೊ ನಿಲ್ದಾಣಗಳು ಜಲಾವೃತಗೊಂಡ ಪ್ರಕರಣಗಳೂ ವರದಿಯಾದವು. ಇದರೊಂದಿಗೆ ಮೊಸಳೆಯೊಂದು ಮುಳುಗಿ ಹೋಗಿರುವ ರಸ್ತೆಯಲ್ಲಿ ತೇಲಿಕೊಂಡು ಹೋಗುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಯಿತು. ನಿರಂತರವಾಗಿ ಸುರಿದ ಮಳೆಯಿಂದಾಗಿ ವಿದ್ಯುತ್ ಪೂರೈಕೆ ಹಾಗೂ ಅಂತರ್ಜಾಲ ಸಂಪರ್ಕಗಳಿಗೆ ಅಡಚಣೆಯುಂಟಾಯಿತು.
ಚಂಡಮಾರುತದ ಕಾರಣಕ್ಕೆ ಹಲವಾರು ರೈಲುಗಳ ಓಡಾಟ ಹಾಗೂ ವಿಮಾನಗಳ ಹಾರಾಟ ಕೂಡಾ ರದ್ದುಗೊಂಡಿದ್ದರಿಂದ ಸಾರಿಗೆ ವ್ಯವಸ್ಥೆಯಲ್ಲೂ ವ್ಯತ್ಯಯವುಂಟಾಯಿತು. ಚೆನ್ನೈ ವಿಮಾನ ನಿಲ್ದಾಣದ ರನ್ ವೇ ಜಲಾವೃತಗೊಂಡಿದ್ದರಿಂದ ಮಂಗಳವಾರ ಬೆಳಗ್ಗೆ 9 ಗಂಟೆಯವರೆಗೂ ವಿಮಾನ ಪ್ರಯಾಣ ರದ್ದಾಗಿದ್ದು, ಇದರಿಂದ ಪ್ರಯಾಣಿಕರಿಗೆ ಅನನುಕೂಲ ಹಾಗೂ ಆತಂಕವುಂಟಾಯಿತು.