ಚಂಡಮಾರುತ ‘ರೆಮಾಲ್’ ಮಧ್ಯರಾತ್ರಿ ತೀರಕ್ಕೆ ಅಪ್ಪಳಿಸುವ ನಿರೀಕ್ಷೆ
ಗಂಟೆಗೆ 110-120 ಕಿ.ಮೀ. ವೇಗದ ಬಿರುಗಾಳಿ; ರೈಲು, ವಿಮಾನ ಸ್ಥಗಿತ
PC : PTI
ಹೊಸದಿಲ್ಲಿ: ಚಂಡಮಾರುತ ‘ರೆಮಾಲ್’ ಪ್ರಬಲ ಬಿರುಗಾಳಿಯಾಗಿ ಪರಿವರ್ತನೆಗೊಂಡಿದ್ದು, ರವಿವಾರ ಮಧ್ಯರಾತ್ರಿ ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳ ನಡುವಿನ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆಯಿದೆ. ಚಂಡಮಾರುತವು ಗಂಟೆಗೆ 110ರಿಂದ 120 ಕಿ.ಮೀ. ವೇಗದಲ್ಲಿ ತೀರವನ್ನು ಪ್ರವೇಶಿಸಲಿದ್ದು, ಗಂಟೆಗೆ 135 ಕಿ.ಮೀ. ಗರಿಷ್ಠ ವೇಗವನ್ನು ಪಡೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಂಡಮಾರುತದ ಪ್ರಭಾವದಿಂದಾಗಿ ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳು ಹಾಗೂ ಕೋಲ್ಕತ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಅತ್ಯಂತ ತೀವ್ರ ಪ್ರಮಾಣದಲ್ಲಿ ಮಳೆ ಸುರಿಯಲಿದೆ.
ಉತ್ತರ ದಿಕ್ಕಿನತ್ತ ಮುಂದುವರಿಯುತ್ತಿರುವ ರೆಮಾಲ್, ಮತ್ತಷ್ಟು ಪ್ರಬಲಗೊಳ್ಳಲಿದ್ದು, ಪಶ್ಚಿಮ ಬಂಗಾಳದ ಸಾಗರ್ ದ್ವೀಪ ಮತ್ತು ಬಾಂಗ್ಲಾದೇಶದ ಖೇಪುಪಾರ ನಡುವೆ ಕರಾವಳಿಗೆ ಅಪ್ಪಳಿಸಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ, ಪೂರ್ವ ಮತ್ತು ಆಗ್ನೇಯ ರೈಲ್ವೇಗಳು ದಕ್ಷಿಣ ಮತ್ತು ಉತ್ತರ 24 ಪರಗಣ ಜಿಲ್ಲೆಗಳು ಮತ್ತು ಪುರ್ಬ ಮೇದಿನಿಪುರ ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರೈಲು ಸೇವೆಯನ್ನು ಸ್ಥಗಿತಗೊಳಿಸಿವೆ.
ಕೋಲ್ಕತ ವಿಮಾನ ನಿಲ್ದಾಣದ ಅಧಿಕಾರಿಗಳು ರವಿವಾರ ಮಧ್ಯಾಹ್ನದಿಂದ ಆರಂಭಿಸಿ 21 ಗಂಟೆಗಳ ಕಾಲ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.