ಡಿ. 8,9ರಂದು ‘ಉತ್ತರಾಖಂಡ ಜಾಗತಿಕ ಹೂಡಿಕೆದಾರರ ಶೃಂಗ’
20 ಸಾವಿರ ಕೋಟಿ ರೂ.ಗೂ ಅಧಿಕ ಮೌಲ್ಯದ ತಿಳುವಳಿಕಾ ಒಪ್ಪಂದಕ್ಕೆ ಸಹಿ
Photo: twitter/pushkardhami
ಹೊಸದಿಲ್ಲಿ: ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಉಪಸ್ಥಿತಿಯಲ್ಲಿ ಅಹ್ಮದಾಬಾದ್ನಲ್ಲಿ ಬುಧವಾರ ನಡೆದ ರೋಡ್ಶೋ ಸಂದರ್ಭ ಆರೋಗ್ಯ ಹಾಗೂ ಶುಶ್ರೂಷೆ, ಆತಿಥ್ಯ, ಉತ್ಪಾದನೆ, ಶಿಕ್ಷಣ, ಲಾಜಿಸ್ಟಿಕ್ ಹಾಗೂ ಇತರ ವಲಯಗಳ 50ಕ್ಕೂ ಅಧಿಕ ಉದ್ಯಮ ಸಮೂಹಗಳೊಂದಿಗೆ 20 ಸಾವಿರ ಕೋಟಿ ರೂ. ಮೌಲ್ಯದ ಹೂಡಿಕೆಯ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಈ ತಿಳುವಳಿಕಾ ಒಪ್ಪಂದದಲ್ಲಿ ಸಹಿ ಮಾಡಿದ ಕಂಪೆನಿಗಳಲ್ಲಿ ಶೀತಲ್ ಸಮೂಹ ಹಾಗೂ ಕಂಪೆನಿ, ರ್ಯಾಂಕರ್ಸ್ ಹಾಸ್ಪಿಟಲ್, ಝಿವಾಯಾ ವೆಲ್ನೆಸ್ ಪ್ರೈವೇಟ್ ಲಿಮಿಟೆಡ್, ಆಸ್ಟ್ರಲ್ ಪೈಪ್ಸ್, ವಾರ್ಮೊರಾ ಟೈಲ್ಸ್, ಗುಜರಾತ್ ಅಂಬುಜಾ ಎಂಕೆಸಿ ಇನ್ಸಾ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಹಾಗೂ ಅಮುಲ್ ಒಳಗೊಂಡಿದೆ.
ಉತ್ತರಾಖಂಡದಲ್ಲಿ ಡಿಸೆಂಬರ್ 8 ಹಾಗೂ 9ರಂದು ನಡೆಯಲಿರುವ ಜಾಗತಿಕ ಹೂಡಿಕೆದಾರರ ಶೃಂಗದ ಹಿನ್ನೆಲೆಯಲ್ಲಿ ಅಹ್ಮದಾಬಾದ್ನಲ್ಲಿ ಬುಧವಾರ ಆಯೋಜಿಸಲಾಗಿದ್ದ ರೋಡ್ ಶೋನಲ್ಲಿ ಪುಷ್ಕರ್ ಸಿಂಗ್ ಧಾಮಿ ಪಾಲ್ಗೊಂಡಿದ್ದರು.
ಈ ಬಾರಿ ಧಾಮಿ ಅವರು ವಿವಿಧ ಉದ್ಯಮ ಸಮೂಹಗಳೊಂದಿಗೆ ಸಭೆ ನಡೆಸಿದ್ದಾರೆ ಹಾಗೂ ಈ ವರ್ಷ ಡಿಸೆಂಬರ್ ನಲ್ಲಿ ಡೆಹ್ರಾಡೂನ್ ನಲ್ಲಿ ಆಯೋಜಿಸಲಾಗಿರುವ ಹೂಡಿಕೆದಾರರ ಶೃಂಗ 2023ಕ್ಕೆ ಎಲ್ಲರನ್ನೂ ಆಹ್ವಾನಿಸಿದ್ದಾರೆ.
ಉತ್ತರಾಖಂಡ ಜಾಗತಿಕ ಹೂಡಿಕೆದಾರರ ಶೃಂಗದ ಹಿನ್ನೆಲೆಯಲ್ಲಿ ಅಹ್ಮದಾಬಾದ್ನಲ್ಲಿ ಆಯೋಜಿಸಲಾಗುತ್ತಿರುವ 6ನೇ ರೋಡ್ ಶೋ ಇದಾಗಿದೆ ಎಂದು ಧಾಮಿ ಅವರು ಹೇಳಿದ್ದಾರೆ.