ಬಿಜೆಪಿ ಶಾಸಕಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಇಸ್ಲಾಂ ಸ್ವೀಕರಿಸುವುದಾಗಿ ಹೇಳಿದ್ದ ಗುಜರಾತ್ ದಲಿತ ಕಾಂಗ್ರೆಸ್ ನಾಯಕನ ವಿರುದ್ಧ ಭಯೋತ್ಪಾದನೆ ಕಾಯ್ದೆಯಡಿ ಪ್ರಕರಣ ದಾಖಲು
PC : indianexpress.com
ಗಾಂಧಿನಗರ: ತನ್ನ ಮಗನ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಗೊಂಡಾಲ ಬಿಜೆಪಿ ಶಾಸಕಿ ಗೀತಾಬಾ ಜಡೇಜಾ ಮತ್ತು ಅವರ ಪತಿಯ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಇಸ್ಲಾಮ್ ಸ್ವೀಕರಿಸುವುದಾಗಿ ಹೇಳಿದ್ದ ದಲಿತ ಕಾಂಗ್ರೆಸ್ ನಾಯಕ ರಾಜೇಶ್ ಅಲಿಯಾಸ್ ರಾಜು ಸೋಲಂಕಿ ಮತ್ತು ಅವರ ಕುಟುಂಬದ ನಾಲ್ವರು ಸದಸ್ಯರ ವಿರುದ್ಧ ಗುಜರಾತ್ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅವರು ೨೦೧೪ರಿಂದಲೂ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಪೋಲಿಸರು ಆರೋಪಿಸಿದ್ದಾರೆ.
ಜುನಾಗಡ ಲೋಕಲ್ ಕ್ರೈಂ ಬ್ರ್ಯಾಂಚ್ನ ಇನ್ಸ್ಪೆಕ್ಟರ್ ಜೆ.ಜೆ.ಪಟೇಲ್ ಅವರು ಭಯೋತ್ಪಾದನೆ ಕಾಯ್ದೆ ಮತ್ತು ಶಸ್ತ್ರಾಸ್ತ್ರಗಳ ಕಾಯ್ದೆಯಡಿ ವಿಭಾಗೀಯ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ರಾಜು,ಅವರ ಸೋದರ ಜಯೇಶ ಅಲಿಯಾಸ್ ಜವೋ ಅಲಿಯಾಸ್ ಸಾವನ್ ಸೋಲಂಕಿ, ಪುತ್ರರಾದ ಸಂಜಯ ಮತ್ತು ದೇವ್ ಹಾಗೂ ಸೋದರಳಿಯ ಯೋಗೇಶ ಬಾಗ್ಡಾ ಅವರನ್ನು ದೂರಿನಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ. ರಾಜು, ಅವರ ಪುತ್ರರು ಮತ್ತು ಸೋದರಳಿಯನನ್ನು ಬಂಧಿಸಲಾಗಿದ್ದು,ಜಯೇಶ ವೈದ್ಯರೋರ್ವರ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಕಳೆದೊಂದು ದಶಕದಲ್ಲಿ ಕೊಲೆ ಯತ್ನ, ಪೋಲಿಸರ ಮೇಲೆ ಹಲ್ಲೆ, ಕಳವು, ಡಕಾಯಿತಿ, ದಂಗೆ, ಹಫ್ತಾವಸೂಲಿ, ಅಪಹರಣ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಸೋಲಂಕಿ ಕುಟುಂಬ ಸದಸ್ಯರ ವಿರುದ್ಧ ಹಲವಾರು ಹಿಂದಿನ ಕ್ರಿಮಿನಲ್ ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ. ರಾಜುವನ್ನು ಗ್ಯಾಂಗ್ ಲೀಡರ್ ಎಂದು ಬಣ್ಣಿಸಿರುವ ಪೋಲಿಸರು, ಕುಟುಂಬದ ಪ್ರತಿಯೊಬ್ಬ ಸದಸ್ಯರ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿರುವುದನ್ನು ಉಲ್ಲೇಖಿಸಿದ್ದಾರೆ.
ಆರೋಪಿ ಶಾಸಕಿ ಮತ್ತು ಅವರ ಪತಿ ಜಯರಾಜ ಸಿಂಹ ವಿರುದ್ಧ ರಾಜ್ಯ ಸರಕಾರವು ಕ್ರಮ ತೆಗೆದುಕೊಳ್ಳದಿದ್ದರೆ ಇಸ್ಲಾಮ್ ಸ್ವೀಕರಿಸುವುದಾಗಿ ರಾಜು ಜು.೧೧ರಂದು ಬೆದರಿಕೆಯೊಡ್ಡಿದ ಮೂರು ವಾರಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಶಾಸಕಿಯ ಪುತ್ರ ಜ್ಯೋತಿರಾದಿತ್ಯ ಸಿಂಹ ಅಲಿಯಾಸ್ ಗಣೇಶ ಸೇರಿದಂತೆ ೧೧ ಜನರ ಗುಂಪು ತನ್ನ ಪುತ್ರ ಸಂಜಯ್ ಮೇಲೆ ಹಲ್ಲೆ ನಡೆಸಿ ಅಪಹರಿಸಿದ್ದರು ಮತ್ತು ಬೆದರಿಕೆಯೊಡ್ಡಿದ್ದರು ಎಂದು ರಾಜು ಆರೋಪಿಸಿದ್ದರು.
ಪ್ರತೀಕಾರದ ಕ್ರಮವಾಗಿ ರಾಜು ಮತ್ತು ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎನ್ನುವುದನ್ನು ನಿರಾಕರಿಸಿರುವ ಎಸ್ಪಿ ಹರ್ಷದ್ ಮೆಹ್ತಾ ಅವರು, ಆರೋಪಿಗಳು ಕ್ರಿಮಿನಲ್ ಚಟುವಟಿಕೆಗಳ ಇತಿಹಾಸವನ್ನು ಹೊಂದಿದ್ದಾರೆ ಮತ್ತು ಇತ್ತೀಚಿನ ಗುಜರಾತ್ ಭಯೋತ್ಪಾದನೆ ಮತ್ತು ಸಂಘಟಿತ ಅಪರಾದಗಳ ನಿಯಂತ್ರಣ ಕಾಯ್ದೆಯಡಿ ಆರೋಪಗಳು ಇದನ್ನು ಆಧರಿಸಿವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ನ ವಿದ್ಯಾರ್ಥಿ ಘಟಕ ಎನ್ಎಸ್ಯುಐ ಜುನಾಗಡ ನಗರ ಘಟಕದ ಅಧ್ಯಕ್ಷರಾಗಿರುವ ಸಂಜಯ ಮೇಲೆ ಹಲ್ಲೆಗಾಗಿ ೧೧ ಆರೋಪಿಗಳ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಾಗಿದೆ.