ಪಿಸ್ತೂಲ್ ತೋರಿಸಿ ನಾಗರಿಕ ಸೇವಾ ಅಧಿಕಾರಿಯಿಂದ ಲೈಂಗಿಕ ಕಿರುಕುಳ : ದಲಿತ ಗುತ್ತಿಗೆ ನೌಕರ ಆರೋಪ
ಸಾಂದರ್ಭಿಕ ಚಿತ್ರ | PC: freepik.com
ಹಿಸಾರ್ : ಹರ್ಯಾಣದ ನಾಗರಿಕ ಸೇವಾ ಅಧಿಕಾರಿ (ಎಚ್ಸಿಎಸ್) ಪಿಸ್ತೂಲ್ ತೋರಿಸಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹರ್ಯಾಣ ಸಾರ್ವಜನಿಕ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರೋರ್ವರು ಆರೋಪಿಸಿದ್ದಾರೆ.
ಈ ಆರೋಪದ ಬಳಿಕ ಹಿಸಾರ್ನಲ್ಲಿ ನಿಯೋಜಿಸಲಾಗಿದ್ದ ಹರ್ಯಾಣ ನಾಗರಿಕ ಸೇವಾ ಅಧಿಕಾರಿಯನ್ನು ರಾಜ್ಯ ಸರಕಾರ ಅಮಾನತುಗೊಳಿಸಿದೆ. ಆದರೆ, ಕಾರಣ ಉಲ್ಲೇಖಿಸಿಲ್ಲ.
ಅಧಿಕಾರಿಯಿಂದ ಲೈಂಗಿಕ ಕಿರುಕುಳ ಆರೋಪಿಸಿ ದಲಿತ ಗುತ್ತಿಗೆ ನೌಕರ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ (ಎನ್ಸಿಎಸ್ಸಿ), ಪಂಜಾಬ್ ಹಾಗೂ ಹರ್ಯಾಣ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು, ಡಿಜಿಪಿ ಅವರಿಗೆ ದೂರು ರವಾನಿಸಿದ್ದಾರೆ.
ಈ ಅಧಿಕಾರಿ ಜಾತಿ ನಿಂದನೆ ಕೂಡ ಮಾಡುತ್ತಿದ್ದ ಎಂದು ದಲಿತ ನೌಕರ ಆರೋಪಿಸಿದ್ದಾರೆ. ನಾವು ಪೋಸ್ಟ್ನಲ್ಲಿ ದೂರು ಸ್ವೀಕರಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾನು 2020ರಿಂದ ಮಸಾಜ್ ಮಾಡುವ ಕಾರ್ಯ ನಿರ್ವಹಿಸುತ್ತಿದ್ದೆ. ಅಧಿಕಾರಿ ಆಗಾಗ ನನ್ನನ್ನು ಕರೆದು ಮಸಾಜ್ ಮಾಡಿಸಿಕೊಂಡು 200 ರೂ. ನೀಡುತ್ತಿದ್ದರು. ಅನಂತರ ಅವರು ನನಗೆ ಜಾಡಮಾಲಿಯ ಕೆಲಸ ನೀಡಿದರು ಎಂದು ಅವರು ಹೇಳಿದ್ದಾರೆ.
ಆರು ತಿಂಗಳ ಹಿಂದೆ ಅವರು ಮಸಾಜ್ ಮಾಡಲು ನನ್ನನ್ನು ಕರೆದರು. ಮೊದಲು ಮಸಾಜ್ ಮಾಡಿಸಿಕೊಂಡರು. ಅನಂತರ ತನ್ನ ಗುಪ್ತಾಂಗಕ್ಕೆ ಕೂಡ ಮಸಾಜ್ ಮಾಡುವಂತೆ ತಿಳಿಸಿದರು. ಆದರೆ, ನಾನು ನಿರಾಕರಿಸಿದೆ. ಬಳಿಕ ಅವರು ಪಿಸ್ತೂಲ್ ತೆಗೆದರು. ಕೊಂದು ಹಾಕುವುದಾಗಿ ಹಾಗೂ ಕೆಲಸದಿಂದ ವಜಾಗೊಳಿಸುವುದಾಗಿ ಬೆದರಿಕೆ ಒಡ್ಡಿದರು. ಅನೈಸರ್ಗಿಕ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಲವಂತಪಡಿಸಿದರು ಎಂದು ಅವರು ಹೇಳಿದ್ದಾರೆ.
ಅನಂತರ ತಾನು ಸಾಕ್ಷ್ಯಗಳನ್ನು ಸಂಗ್ರಹಿಸಲು ಈ ಶೋಷಣೆಯ ವೀಡಿಯೊ ದಾಖಲಿಸಿಕೊಂಡೆ. ಅಲ್ಲಿಗೆ ಹೋಗುವುದನ್ನು ನಿಲ್ಲಿಸಿದೆ. ಒಂದೋ ಸಾಯಬೇಕು, ಇಲ್ಲವೇ ಅವರ ವಿರುದ್ಧ ದೂರು ದಾಖಲಿಸಬೇಕು ಎಂದು ನಿರ್ಧರಿಸಿದೆ. ನಾನು ಹೃದ್ರೋಗಿ ಎಂದು ನೌಕರ ಹೇಳಿದ್ದಾರೆ.
ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಇಲ್ಲಿಗೆ ಆಗಮಿಸುವಂತೆ ನಾವು ದೂರುದಾರನಿಗೆ ನಿರ್ದೇಶಿಸಿದ್ದೇವೆ ಎಂದು ಹಿಸಾರ್ ಪೊಲೀಸ್ ಅಧೀಕ್ಷಕ ಶಶಾಂಕ್ ಕುಮಾರ್ ಸಾವನ್ ತಿಳಿಸಿದ್ದಾರೆ.