ಗುಜರಾತ್: ಕಳ್ಳತನ ಮಾಡಿದ ಶಂಕೆಯಲ್ಲಿ ದಲಿತ ಇಂಜಿನಿಯರ್ನನ್ನು ಥಳಿಸಿದ ಸಹೋದ್ಯೋಗಿಗಳು
Photo credit: indiatoday.in
ಬನಸ್ಕಾಂತ (ಗುಜರಾತ್): ಡೀಸೆಲ್ ಕಳವು ಮಾಡಿದ ಶಂಕೆಯಲ್ಲಿ ದಲಿತ ಸಮುದಾಯಕ್ಕೆ ಸೇರಿರುವ ಇಂಜಿನಿಯರ್ ಒಬ್ಬರ ಮೇಲೆ ಐದು ಮಂದಿ ಸಹೋದ್ಯೋಗಿಗಳು ಹಲ್ಲೆ ನಡೆಸಿರುವ ಘಟನೆ ಗುಜರಾತ್ ರಾಜ್ಯದ ಬನಸ್ಕಾಂತ ಜಿಲ್ಲೆಯಲ್ಲಿ ನಡೆದಿದೆ. ಪಲನ್ ಪುರ್ ನಲ್ಲಿನ ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿರುವ ಸಂತ್ರಸ್ತನನ್ನು ಸಹೋದ್ಯೋಗಿಗಳು ಥಳಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.
ಸೆಪ್ಟೆಂಬರ್ 28ರಂದು 25 ವರ್ಷದ ಇಂಜಿನಿಯರ್ ನಿವಾಸಕ್ಕೆ ಅವರ ಸಹೋದ್ಯೋಗಿಗಳು ಭೇಟಿ ನೀಡಿದ್ದಾರೆ. ನಂತರ ಹೋಟೆಲ್ ಒಂದರಲ್ಲಿ ಮತ್ತೊಬ್ಬ ಸಹೋದ್ಯೋಗಿಯ ಹುಟ್ಟುಹಬ್ಬದ ಔತಣ ಕೂಟವಿದೆ ಎಂದು ಆತನನ್ನು ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ.
ಸೇತುವೆಯೊಂದರ ಮೇಲೆ ಕಾರು ನಿಲ್ಲಿಸಿರುವ ಅವರು, ನೀನು ಡೀಸೆಲ್ ಕಳವು ಮಾಡಿದ್ದೀಯ, ಅದನ್ನು ಮತ್ತೊಬ್ಬ ಸಹೋದ್ಯೋಗಿ ಭರತ್ ಠಾಕೂರ್ ನೋಡಿದ್ದಾನೆ ಎಂದು ಆರೋಪಿಸಿದ್ದಾರೆ. ನಂತರ ಆ ದಲಿತ ಇಂಜಿನಿಯರ್ ಗೆ ಜಾತಿ ನಿಂದನೆ ಮಾಡಿರುವ ಅವರು, ಮನಬಂದಂತೆ ಥಳಿಸಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಯಲ್ಲಿ ಗಾಯಗೊಂಡಿರುವ ಇಂಜಿನಿಯರ್ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ನಡುವೆ, ಗುಜರಾತ್ ನಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಸಮಾಜ ವಿರೋಧಿ ಶಕ್ತಿಗಳಿಗೆ ಕಾನೂನಿನ ಬಗ್ಗೆ ಯಾವುದೇ ಭಯವಿಲ್ಲದಂತಾಗಿದೆ ಎಂದು ಗುಜರಾತ್ ರಾಜ್ಯದ ಕಾಂಗ್ರೆಸ್ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ಹಿತೇಂದ್ರ ಪಿತಾಡಿಯ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು, “ಘಟನೆ ನಡೆದು ಎರಡು ದಿನಗಳಾಗಿದ್ದರೂ, ಯಾವುದೇ ಆರೋಪಿಯ ಬಂಧನವಾಗಿಲ್ಲ. ಇದು ಗುಜರಾತ್ ಬಿಜೆಪಿ ಸರ್ಕಾರ ಹಾಗೂ ಗುಜರಾತ್ ಪೊಲೀಸರು ದಲಿತರ ಬಗ್ಗೆ ಹೊಂದಿರುವ ಮನೋಭಾವವನ್ನು ತೋರಿಸುತ್ತಿದೆ” ಎಂದು ಕಿಡಿ ಕಾರಿದ್ದಾರೆ.
ಆದರೆ, ಈ ಸಂಬಂಧ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.