ಮೋಸಕ್ಕೆ ಬಲಿಯಾಗಿ 11 ಕೋಟಿ ರೂ.ಗಳ ಚುನಾವಣಾ ಬಾಂಡ್ ಗಳನ್ನು ಖರೀದಿಸಿದ್ದ ಗುಜರಾತಿನ ದಲಿತ ರೈತರು
ಭೂ ಪರಿಹಾರ ನಿಧಿಯಿಂದ ʼಬಾಂಡ್ʼ ಖರೀದಿಸಿದರೆ ಹಣ ಒಂದೂವರೆ ಪಟ್ಟಾಗಲಿದೆ ಎಂದು ವಂಚನೆ!
ಸಾಂದರ್ಭಿಕ ಚಿತ್ರ
ಅಹ್ಮದಾಬಾದ್ : ಗುಜರಾತಿನ ದಲಿತ ಕುಟುಂಬವೊಂದರ ಆರು ಸದಸ್ಯರು ಮೋಸಕ್ಕೆ ಬಲಿಯಾಗಿ 2023, ಅ.11ರಂದು 11,00,14,000 ರೂ.ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಖರೀದಿಸಿದ್ದರು ಎಂದು ಹೇಳಲಾಗಿದೆ.
ಈ ಪೈಕಿ 10 ಕೋಟಿ ರೂ.ಮೌಲ್ಯದ ಬಾಂಡ್ ಗಳನ್ನು ಬಿಜೆಪಿ ನಗದೀಕರಿಸಿದ್ದರೆ, ಶಿವಸೇನೆಯು ಒಂದು ಕೋಟಿ ಹದಿನಾಲ್ಕು ಸಾವಿರ ರೂ.ಗಳನ್ನು ಪಡೆದುಕೊಂಡಿತ್ತು.
ವೆಲ್ಸ್ಪನ್ ಎಂಟರ್ಪ್ರೈಸಸ್ ಲಿಮಿಟೆಡ್ ನ ಅಧಿಕಾರಿಯೋರ್ವರು ದಲಿತ ಸಂತ್ರಸ್ತರನ್ನು ವಂಚಿಸಿದ್ದರು. ಚುನಾವಣಾ ಬಾಂಡ್ ಗಳಲ್ಲಿ ಹೂಡಿಕೆ ಮಾಡಿದರೆ ಕೆಲವೇ ವರ್ಷಗಳಲ್ಲಿ ಹಣವು ಒಂದೂವರೆ ಪಟ್ಟು ಹೆಚ್ಚಾಗುತ್ತದೆ ಎಂದು ಅಧಿಕಾರಿ ಅವರಿಗೆ ಭರವಸೆ ನೀಡಿದ್ದರು. ವೆಲ್ಸ್ಪನ್ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.
ಕಂಪನಿಯು ಈ ದಲಿತರಿಗೆ ಸೇರಿದ ಸುಮಾರು 43,000 ಚ.ಮೀ.ವಿಸ್ತೀರ್ಣದ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿತ್ತು. ಆದಾಯ ತೆರಿಗೆ ಇಲಾಖೆಯಿಂದ ಕಿರಿಕಿರಿ ತಪ್ಪಿಸುವ ನೆಪದಲ್ಲಿ ಪರಿಹಾರದ ಹಣವನ್ನು ಬಾಂಡ್ ಗಳ ಖರೀದಿಗೆ ಬಳಸುವಂತೆ ಅವರನ್ನು ಓಲೈಸಿತ್ತು ಎಂದು ಸುದ್ದಿ ಜಾಲತಾಣ ‘ದಿ ಕ್ವಿಂಟ್’ ತನ್ನ ವರದಿಯಲ್ಲಿ ಹೇಳಿದೆ.
‘ವೆಲ್ಸ್ಪನ್ ಯೋಜನೆಯೊಂದಕ್ಕಾಗಿ ಅಂಜಾರ್ನಲ್ಲಿಯ ನಮ್ಮ ಕೃಷಿ ಭೂಮಿಯ 43,000 ಚ.ಮೀ.ಭಾಗವನ್ನು ಸ್ವಾಧೀನ ಪಡಿಸಿಕೊಂಡಿತ್ತು. ಕಾನೂನಿನಂತೆ ನಮಗೆ ಪರಿಹಾರದ ಹಣ ದೊರಕಿತ್ತು. ಆದರೆ ಹಣವನ್ನು ಠೇವಣಿ ಮಾಡುವ ಸಂದರ್ಭದಲ್ಲಿ ಕಂಪನಿಯ ಸೀನಿಯರ್ ಜನರಲ್ ಮ್ಯಾನೇಜರ್ ಮಹೇಂದ್ರ ಸಿನ್ಹ ಸೋಧಾ ಅವರು, ಇಷ್ಟೊಂದು ದೊಡ್ಡ ಮೊತ್ತ ಆದಾಯ ತೆರಿಗೆ ತೊಂದರೆಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದರು. ಚುನಾವಣಾ ಬಾಂಡ್ ಯೋಜನೆಯನ್ನು ನಮಗೆ ಪರಿಚಯಿಸಿದ ಅವರು ಅದರಲ್ಲಿ ಹಣ ಹೂಡಿಕೆ ಮಾಡಿದರೆ ಕೆಲವೇ ವರ್ಷಗಳಲ್ಲಿ ಒಂದೂವರೆ ಪಟ್ಟು ಹೆಚ್ಚುತ್ತದೆ ಎಂದು ತಿಳಿಸಿದ್ದರು. ನಾವು ಅನಕ್ಷರಸ್ಥರು,ಈ ಯೋಜನೆ ಏನು ಎನ್ನುವುದು ನಮಗೆ ತಿಳಿದಿರಲಿಲ್ಲ. ಆದರೆ ಆ ಸಮಯದಲ್ಲಿ ಅವರು ಹೂಡಿಕೆ ಮಾಡುವಂತೆ ನಮ್ಮನ್ನು ಪುಸಲಾಯಿಸಿದ್ದರು ’ಎಂದು ಮೋಸ ಹೋದ ಆರು ಜನರ ಪೈಕಿ ಓರ್ವರ ಪುತ್ರ ಹರೇಶ ಸವಕಾರ ತಿಳಿಸಿದರು.
ಎಲ್ಲ ಸಂತ್ರಸ್ತರ ಪರವಾಗಿ ಹೊರಡಿಸಿರುವ ಹೇಳಿಕೆಯಲ್ಲಿ ಸವಕಾರ, ಸೋಧಾ ಜೊತೆಗೆ ವೆಲ್ಸ್ಪನ್ ಕಂಪನಿಯ ನಾಲ್ವರು ನಿರ್ದೇಶಕರು, ಅಂಜಾರ ಭೂಸ್ವಾಧೀನಾಧಿಕಾರಿ ಕಿಶೋರ ಜೋಶಿ, ಬಿಜೆಪಿಯ ಅಂಜಾರ ನಗರಾಧ್ಯಕ್ಷ ಹೇಮಂತ ಅಲಿಯಾಸ್ ಡ್ಯಾನಿ ರಜನಿಕಾಂತ ಶಾ ಅವರನ್ನು ಆರೋಪಿಗಳನ್ನಾಗಿ ಹೆಸರಿಸಿದ್ದಾರೆ.
ಆದರೆ ಪ್ರಕರಣದಲ್ಲಿ ಈ ವರೆಗೆ ಯಾವುದೇ ಪೋಲಿಸ್ ವರದಿ ಸಲ್ಲಿಕೆಯಾಗಿಲ್ಲ. ಪ್ರಕರಣದಲ್ಲಿ ತನಿಖೆಯು ಪೂರ್ಣಗೊಂಡ ಬಳಿಕ ಎಫ್ಐಆರ್ ದಾಖಲಿಸುತ್ತೇವೆ ಎಂದು ತನಿಖಾಧಿಕಾರಿ ತಿಳಿಸಿದರು.