ದಲಿತ ಯುವತಿ ಮೇಲಿನ ಹಲ್ಲೆ ಪ್ರಕರಣ: ಎಫ್ಐಆರ್ ಆಗಿ ಐದು ದಿನವಾದರೂ ಬಂಧನವಾಗದ ಡಿಎಂಕೆ ಶಾಸಕನ ಪುತ್ರ
ಐ.ಕರುಣಾನಿಧಿ| Photo: indiatoday.in
ಚೆನ್ನೈ: ಡಿಎಂಕೆ ಶಾಸಕ ಐ.ಕರುಣಾನಿಧಿಯವರ ಪುತ್ರ ಆ್ಯಂಥೊ ಮತಿವಣ್ಣನ್ ಹಾಗೂ ಆತನ ಪತ್ನಿ ಮರ್ಲೇನಾ ಆ್ಯನ್ ತನ್ನನ್ನು ನಿಂದಿಸಿ, ಹಲ್ಲೆ ನಡೆಸಿ, ಕಿರುಕುಳ ನೀಡಿದ್ದಾರೆ ಎಂದು 18 ವರ್ಷದ ದಲಿತ ಸಮುದಾಯದ ಮನೆಗೆಲಸದ ಯುವತಿಯು ದೂರು ನೀಡಿ ಐದು ದಿನ ಕಳೆದರೂ, ಪೊಲೀಸರು ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಮೂಲಗಳು ದೃಢಪಡಿಸಿವೆ ಎಂದು The Quint ಸುದ್ದಿ ಸಂಸ್ಥೆ ವರದಿ ಮಾಡಿದೆ.
“ಆರೋಪಿಗಳ ಶುಕ್ರವಾರದಿಂದ ನಾಪತ್ತೆಯಾಗಿದ್ದಾರೆ. ನಾವು ಅವರಿರುವ ಸ್ಥಳವನ್ನು ಪತ್ತೆ ಹಚ್ಚಲು ಸಾಧ್ಯವಾಗದೆ ಇರುವುದರಿಂದ ಇದುವರೆಗೂ ಯಾವುದೇ ಬಂಧನವಾಗಿಲ್ಲ. ತನಿಖೆಯು ಪ್ರಗತಿಯಲ್ಲಿರುವುದರಿಂದ ನಾವು ಹೆಚ್ಚು ಮಾಹಿತಿಯನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಹಾಗೂ ಆರೋಪಿಗಳನ್ನು ಹಿಡಿಯಲು ಶೋಧ ಕಾರ್ಯ ಮುಂದುವರಿದಿದೆ” ಎಂದು ಹೆಸರೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ, ಪ್ರಕರಣದಿಂದ ಅಂತರ ಕಾಯ್ದುಕೊಂಡಿರುವ ಪಲ್ಲವರಂ ಶಾಸಕ ಕರುಣಾನಿಧಿ, ನನ್ನ ಪುತ್ರ ಹಾಗೂ ಸೊಸೆ ಎಲ್ಲಿದ್ದಾರೆ ಎಂಬುದು ನನಗೆ ತಿಳಿದಿಲ್ಲ ಹಾಗೂ ಅವರಿಬ್ಬರೂ ನನ್ನ ಸಂಪರ್ಕದಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜನವರಿ 18ರಂದು ತಮಿಳುನಾಡು ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ಸಲ್ಲಿಸಿರುವ 18 ವರ್ಷದ ದಲಿತ ಯುವತಿಯು, ಕಳೆದ ಎಂಟು ತಿಂಗಳಿನಿಂದ ಶಾಸಕರ ಪುತ್ರ ಹಾಗೂ ಸೊಸೆ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಳು ಎನ್ನಲಾಗಿದೆ.
ಚೆನ್ನೈನಿಂದ ಸುಮಾರು 200 ಕಿಮೀ ದೂರವಿರುವ ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಉಲುಂದುರ್ಪೇಟ್ ನ ನಿವಾಸಿಯಾದ ದೂರುದಾರ ಯುವತಿಯು, ತಾನು 12ನೇ ತರಗತಿ ಪರೀಕ್ಷೆಯಲ್ಲಿ 600 ಅಂಕಗಳ ಪೈಕಿ 433 ಅಂಕಗಳನ್ನು ಗಳಿಸಿದ್ದು, ನೀಟ್ ಪರೀಕ್ಷೆಯನ್ನು ಪಾಸು ಮಾಡಿ ಎಂಬಿಬಿಎಸ್ ಮಾಡಬೇಕು ಎಂದು ಬಯಸಿದ್ದೆ ಎಂದು ದೂರಿನಲ್ಲಿ ಹೇಳಿದ್ದಾಳೆ ಎನ್ನಲಾಗಿದೆ.
ಆದರೆ, ಹಣಕಾಸಿನ ಮುಗ್ಗಟ್ಟಿನಿಂದಾಗಿ ಚೆನ್ನೈನ ತಿರುವನ್ಮಿಯುರ್ ನಲ್ಲಿರುವ ಮತಿವಣ್ಣನ್ ಅವರ ನಿವಾಸದಲ್ಲಿ ಎಪ್ರಿಲ್ 2023ರಿಂದ ಮನೆಗೆಲಸದಲ್ಲಿ ತೊಡಗಿಸಿಕೊಂಡೆ. ಅದಕ್ಕಾಗಿ ನನಗೆ ಮಾಸಿಕ ರೂ. 16,000 ವೇತನ ನೀಡಲಾಗುತ್ತಿತ್ತು. ಆ ಮೊತ್ತವನ್ನು ನೀಟ್ ತರಬೇತಿಗಾಗಿ ಉಳಿಸಬೇಕು ಎಂದು ನಾನು ಬಯಸಿದ್ದೆ ಎಂದು ಆಕೆ ವಿವರಿಸಿದ್ದಾಳೆ. ಆದರೆ, ನನಗೆ ವೇತನ ನೀಡದೆ, ನನ್ನ ಕುಟುಂಬದ ಸದಸ್ಯರೊಂದಿಗೆ ಸಂಪರ್ಕಿಸಲೂ ಅವಕಾಶ ನೀಡದೆ, ನನ್ನ ಮೇಲೆ ಹಲ್ಲೆ ನಡೆಸಿ, ನನಗೆ ವೈದ್ಯಕೀಯ ನೆರವನ್ನೂ ನಿರಾಕರಿಸಲಾಗಿತ್ತು ಎಂದು ಆಕೆ ದೂರಿದ್ದಾಳೆ ಎಂದು ತಿಳಿದು ಬಂದಿದೆ.
ಈ ವಿಷಯವನ್ನು ಬಹಿರಂಗಪಡಿಸಿದರೆ, ಗಂಭೀರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ತನ್ನನ್ನು ಬೆದರಿಸಲಾಗಿತ್ತು ಎಂದು ಆ ಸಂತ್ರಸ್ತ ಯುವತಿಯು ಆರೋಪಿಸಿದ್ದಾಳೆ ಎನ್ನಲಾಗಿದೆ.
ಸಂತ್ರಸ್ತ ಯುವತಿಯ ತಾಯಿಯು ಪೊಂಗಲ್ ಆಚರಿಸಲು ತನ್ನ ಪುತ್ರಿಯನ್ನು ಮನೆಗೆ ಕಳಿಸಿಕೊಡುವಂತೆ ಬಹಳಷ್ಟು ಬಾರಿ ಮನವಿ ಮಾಡಿದ ನಂತರ ಜನವರಿ 15ರಂದು ಮತಿವಣ್ಣನ್ ಹಾಗೂ ಅವರ ಪತ್ನಿ ಮರ್ಲೇನಾ ಆಕೆಯನ್ನು ಆಕೆಯ ನಿವಾಸಕ್ಕೆ ಬಿಟ್ಟು ಬಂದಿದ್ದರು. ಇದರ ಬೆನ್ನಿಗೇ ಈ ಘಟನೆಯು ಬಹಿರಂಗಗೊಂಡಿತ್ತು.
ನಂತರ ಕುಟುಂಬದ ಸದಸ್ಯರು ಆಕೆಯನ್ನು ಉಲುಂದುರ್ಪೇಟ್ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯಕೀಯ ತಪಾಸಣೆಯ ಸಂದರ್ಭದಲ್ಲಿ ಆಕೆಯ ದೇಹದ ಮೇಲೆ ಗಂಭೀರ ಗಾಯದ ಗುರುತುಗಳನ್ನು ಪತ್ತೆ ಹಚ್ಚಿದ್ದ ವೈದ್ಯರು, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ.