ಮಧ್ಯಪ್ರದೇಶದಲ್ಲಿ ದಲಿತರ ಮನೆಗಳು ನೆಲಸಮ: ಮಾಜಿ ಸಿಎಂ ದಿಗ್ವಿಜಯ ಸಿಂಗ್ ಪ್ರತಿಭಟನೆ
Photo: scroll.in
ಭೋಪಾಲ: ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ದಲಿತ ಕುಟುಂಬಗಳಿಗೆ ಸೇರಿದ ಮನೆಗಳನ್ನು ಬುಧವಾರ ನೆಲಸಮಗೊಳಿಸಲಾಗಿದ್ದು, ಇದನ್ನು ವಿರೋಧಿಸಿ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಈ ಮನೆಗಳನ್ನು ಅರಣ್ಯ ಭೂಮಿಯಲ್ಲಿ ನಿರ್ಮಿಸಲಾಗಿತ್ತು ಎಂದು ಆರೋಪಿಸಿದ ಜಿಲ್ಲಾಡಳಿತದ ಅಧಿಕಾರಿಗಳು,ಒಂದು ವರ್ಷದ ಹಿಂದೆಯೇ ನಿವಾಸಿಗಳಿಗೆ ನೋಟಿಸ್ಗಳನ್ನು ಕಳುಹಿಸಲಾಗಿತ್ತು ಎಂದು ತಿಳಿಸಿದರು.
ಆದರೆ,ತಮಗೆ ನೋಟಿಸ್ ಗಳನ್ನು ನೀಡಿರಲಿಲ್ಲ ಮತ್ತು ತಾವು ಕಳೆದ 50 ವರ್ಷಗಳಿಂದಲೂ ಈ ಪ್ರದೇಶದಲ್ಲಿ ವಾಸವಾಗಿದ್ದೇವೆ ಎಂದು ಹೇಳಿದ ನಿವಾಸಿಗಳು, ಮನೆಗಳ ಮೇಲೆ ಬುಲ್ಡೋಜರ್ ಚಲಾಯಿಸುವ ಮುನ್ನ ತಮ್ಮ ಸೊತ್ತುಗಳನ್ನು ತೆಗೆದುಕೊಳ್ಳಲೂ ತಮಗೆ ಅವಕಾಶ ನೀಡಿರಲಿಲ್ಲ ಎಂದು ಆರೋಪಿಸಿದರು.
ನಿವೇಶನದಲ್ಲಿ ಹೊಸದಾಗಿ ನಿರ್ಮಾಣ ಚಟುವಟಿಕೆಗಳು ಆರಂಭಗೊಂಡ ನಂತರ ನೆಲಸಮ ಕಾರ್ಯಾಚರಣೆ ನಡೆದಿದೆ. ಓರ್ವ ಅರಣ್ಯ ವಲಯಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ನೆಲಸಮ ಕಾರ್ಯಾಚರಣೆಯ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ದಿಗ್ವಿಜಯ ಸಿಂಗ್, ಅರಣ್ಯ ಭೂಮಿಯಲ್ಲಿ ಮನೆಗಳು ನಿರ್ಮಾಣಗೊಳ್ಳುತ್ತಿದ್ದಾಗ ಬಿಜೆಪಿ ಸರಕಾರವೇಕೆ ನಿದ್ರಿಸಿತ್ತು ಎಂದು ಪ್ರಶ್ನಿಸಿದರು. ‘ಬಿಜೆಪಿ ನಾಯಕರ ಮನೆಗಳು ಅರಣ್ಯ ಭೂಮಿಯಲ್ಲಿ ನಿರ್ಮಾಣಗೊಂಡಿಲ್ಲವೇ? ಅವುಗಳನ್ನು ಏಕೆ ನೆಲಸಮಗೊಳಿಸಿಲ್ಲ? ಇದು ಬಡ ಪರಿಶಿಷ್ಟ ಜಾತಿ ಕುಟುಂಬಗಳಿಗೆ ಮಾಡಿರುವ ಘೋರ ಅನ್ಯಾಯವಾಗಿದೆ. ಇದನ್ನು ನಾವು ಸಹಿಸುವುದಿಲ್ಲ ’ ಎಂದು ಹೇಳಿದರು. ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡುವಂತೆ ಅವರು ಆಗ್ರಹಿಸಿದರು.
10 ಮನೆಗಳನ್ನು ನೆಲಸಮಗೊಳಿಸಲಾಗಿದೆ ಎಂದು ಸಿಂಗ್ ಪ್ರತಿಪಾದಿಸಿದ್ದರೆ, ಜಿಲ್ಲಾಧಿಕಾರಿ ದೀಪಕ ಆರ್ಯ ಅವರು ಏಳು ಮನೆಗಳನ್ನು ಕೆಡವಲಾಗಿದೆ ಎಂದು ತಿಳಿಸಿದರು. ಈ ಮನೆಗಳನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಏಕೆ ಜಿಯೊಟ್ಯಾಗ್ ಮಾಡಲಾಗಿತ್ತು ಎಂಬ ಕುರಿತು ತನಿಖೆ ನಡೆಸಲಾಗುವುದು ಎಂದರು.
ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರೆ ಅರಣ್ಯ ವಲಯಾಧಿಕಾರಿಯನ್ನು ಅಮಾನತು ಮಾಡಿದ್ದೇಕೆ ಎಂಬ ಸುದ್ದಿಗಾರರ ಪ್ರಶ್ನೆಗೆ ಆರ್ಯ, ಅವರು ಕಾರ್ಯವಿಧಾನವನ್ನು ಅನುಸರಿಸಿರಲಿಲ್ಲ. ನಿರ್ಮಾಣ ಹಂತದಲ್ಲಿರುವ ಮತ್ತು ಖಾಲಿಯಿರುವ ಮನೆಗಳನ್ನು ಕೆಡವಲು ಕಾರ್ಯ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಉಳಿದ ಜನರನ್ನು ಸ್ಥಳಾಂತರಿಸಬೇಕಿತ್ತು, ಆದರೆ ಅರಣ್ಯ ವಲಯಾಧಿಕಾರಿ ಅವಸರ ಮಾಡಿದ್ದರು ಎಂದು ಉತ್ತರಿಸಿದರು.
ಜಿಲ್ಲಾಡಳಿತವು ಆರು ಕುಟುಂಬಗಳಿಗೆ ಭೂ ದಾಖಲೆ ನೀಡುವ ಮೂಲಕ ಅವರನ್ನು ಪುನರ್ವಸತಿಗೊಳಿಸಲಿದೆ ಎಂದರು.
ವಲಯ ಅರಣ್ಯಾಧಿಕಾರಿಯ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಸಿಂಗ್ ಆಗ್ರಹಿಸಿದ್ದಾರೆ. ನೆಲಸಮ ಕಾರ್ಯಾಚರಣೆಯು ಬಿಜೆಪಿ ಸರಕಾರದ ವಿನಾಶಕಾರಿ ದುರುದ್ದೇಶಪೂರಿತ ಬುಲ್ಡೋಜರ್ ರಾಜಕೀಯ ಎಂದು ಬಿಎಸ್ಪಿ ಮುಖ್ಯಸ್ಥರು ಬಣ್ಣಿಸಿದ್ದಾರೆ.