ಮಧ್ಯಪ್ರದೇಶ | ಪೊಲೀಸ್ ಠಾಣೆಯಲ್ಲಿ ಹೇಳಿಕೆ ದಾಖಲಿಸುವಾಗ ದಲಿತ ವ್ಯಕ್ತಿಯ ಮೃತ್ಯು
ಹತ್ಯೆ ಎಂದು ಆರೋಪಿಸಿದ ಪುತ್ರ ; ಸಿಎಂ ಮೋಹನ್ ಯಾದವ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಸಾಂದರ್ಭಿಕ ಚಿತ್ರ | PC : PTI
ದೇವಾಸ್: ಮಧ್ಯ ಪ್ರದೇಶದ ದೇವಾಸ್ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ 35 ವರ್ಷದ ದಲಿತ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ನನ್ನ ತಂದೆಯನ್ನು ಹತ್ಯೆಗೈಯ್ಯಲಾಗಿದೆ ಎಂದು ಮೃತ ವ್ಯಕ್ತಿಯ ಪುತ್ರ ಆರೋಪಿಸಿದ್ದಾನೆ. ಇದರ ಬೆನ್ನಿಗೇ, ರಾಜ್ಯವು ರವಿವಾರ ಜಂಗಲ್ ರಾಜ್ ಆಗಿದೆ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್, ಮುಖ್ಯಮಂತ್ರಿ ಮೋಹನ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದೆ.
ಡಿಸೆಂಬರ್ 26ರಂದು ಮಹಿಳೆಯೊಬ್ಬರು ನೀಡಿದ್ದ ದೂರನ್ನು ಆಧರಿಸಿ, ವಿಚಾರಣೆಗಾಗಿ ಮುಕೇಶ್ ಲೋಂಗ್ರೆ ಎಂಬ ವ್ಯಕ್ತಿಯನ್ನು ಶನಿವಾರ ಸತ್ವಾಸ್ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಕರೆಸಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಪುನೀತ್ ಗೆಹ್ಲೋಟ್ ತಿಳಿಸಿದ್ದಾರೆ.
“ಇನ್ಸ್ ಪೆಕ್ಟರ್ ಆಶಿಶ್ ರಜಪೂತ್ ಆತನ ಹೇಳಿಕೆಯನ್ನು ದಾಖಲಿಸಿಕೊಳ್ಳುವಾಗ, ಲಾಕಪ್ ನೊಳಗಿದ್ದ ಲೋಂಗ್ರೆ ತನ್ನ ಕುತ್ತಿಗೆಯನ್ನು ಕಿಟಕಿಯ ಸರಳುಗಳಿಗೆ ಟವೆಲ್ ನಿಂದ ಬಿಗಿದುಕೊಂಡು ತನ್ನ ಕುತ್ತಿಗೆಯನ್ನು ಅಲುಗಾಡಿಸಲು ಪ್ರಾರಂಭಿಸಿದ. ಕೂಡಲೇ ಆತನನ್ನು ತಡೆದ ಪೊಲೀಸರು, ಆತನನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ, ಆತ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು” ಎಂದು ಅವರು ಹೇಳಿದ್ದಾರೆ.
“ಆತನ ವಿರುದ್ಧ ಯಾವುದೇ ಪ್ರಕರಣವಿರಲಿಲ್ಲ. ಆತನ ಹೇಳಿಕೆಯನ್ನು ದಾಖಲಿಸಿಕೊಳ್ಳಲಷ್ಟೇ ಠಾಣೆಗೆ ಕರೆಸಿಕೊಳ್ಳಲಾಗಿತ್ತು. ಆತನ ಮೃತ್ಯುವಿನ ಕುರಿತು ಪ್ರಥಮ ದರ್ಜೆಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ತನಿಖೆ ಕೈಗೊಂಡಿದ್ದಾರೆ. ಇಂದು ಬೆಳಗ್ಗೆ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಮರಣೋತ್ತರ ಪರೀಕ್ಷಾ ಪ್ರಕ್ರಿಯೆಯ ಉಸ್ತುವಾರಿ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳು ವೈದ್ಯರನ್ನು ನೇಮಿಸಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಈ ನಡುವೆ, ಮಹಿಳೆಯೊಬ್ಬರು ತನ್ನ ತಂದೆಯ ವಿರುದ್ಧ ನೀಡಿದ್ದ ದೂರಿಗೆ ಸಂಬಂಧಿಸಿದ ಕ್ರಮದ ತೀವ್ರತೆಯನ್ನು ಕಡಿತಗೊಳಿಸಲು ಪೊಲೀಸರು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ನಂತರ ಪೊಲೀಸ್ ಸಿಬ್ಬಂದಿಗಳು ನನ್ನ ತಂದೆ ಮೃತಪಟ್ಟಿದ್ದಾರೆ ಎಂದು ತಿಳಿಸಿದರು ಎಂದು ಲೋಂಗ್ರಾರ ಪುತ್ರ ಆರೋಪಿಸಿದ್ದಾನೆ.
ಪೊಲೀಸ್ ಠಾಣೆ ಎದುರು ಶನಿವಾರ ಪ್ರಾರಂಭಗೊಂಡ ಪ್ರತಿಭಟನೆಯು ರವಿವಾರ ಕೂಡಾ ಮುಂದುವರಿದಿದ್ದು, ಪೊಲೀಸರು ತನ್ನ ತಂದೆಯನ್ನು ಹತ್ಯೆಗೈದಿದ್ದಾರೆ ಎಂದು ಲೋಂಗ್ರಾರ ಪುತ್ರ ಪುನರುಚ್ಚರಿಸಿದ್ದಾನೆ.
ಈ ಸಂಬಂಧ ಗೃಹ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಮೋಹನ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, “ಮಧ್ಯಪ್ರದೇಶದಲ್ಲಿ ಜಂಗಲ್ ರಾಜ್ ನಡೆಯುತ್ತಿದೆ. ಓರ್ವ ದಲಿತ ವ್ಯಕ್ತಿಯನ್ನು ಪೊಲೀಸ್ ಠಾಣೆಯೊಳಗೆ ಹತ್ಯೆಗೈಯ್ಯಲಾಗಿದೆ. ಈ ಘಟನೆಯ ಪೂರ್ಣ ಜವಾಬ್ದಾರಿಯನ್ನು ಮುಖ್ಯಮಂತ್ರಿ ಮೋಹನ್ ಯಾದವ್ ಹೊರಬೇಕು” ಎಂದು ಆಗ್ರಹಿಸಿದೆ.
ಇದಲ್ಲದೆ, ರವಿವಾರ ಸತ್ವಾಸ್ ಪೊಲೀಸ್ ಠಾಣೆ ಎದುರು ಪ್ರತಿಭಟನೆಯನ್ನೂ ನಡೆಸಿದ್ದು, ಈ ಪ್ರತಿಭಟನೆಯಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಜಿತು ಪತ್ವಾರಿ ಕೂಡಾ ಭಾಗವಹಿಸಿದ್ದರು.