ದಿಲ್ಲಿ ಚುನಾವಣಾ ಫಲಿತಾಂಶ | ದಲಿತ, ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಆಪ್ ಗೆ ಜಯ: ಮತ ಹಂಚಿಕೆಯಲ್ಲಿ ಗಣನೀಯ ಬದಲಾವಣೆ!

ಅರವಿಂದ್ ಕೇಜ್ರಿವಾಲ್ (PTI)
ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. 48 ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸುವ ಮೂಲಕ 27 ವರ್ಷಗಳ ಬಳಿಕ ರಾಷ್ಟ್ರರಾಜಧಾನಿಯಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ. ಆಡಳಿತರೂಢ ಆಪ್ ಪಕ್ಷವು ದಿಲ್ಲಿಯ 70 ಸ್ಥಾನಗಳಲ್ಲಿ ಕೇವಲ 22 ಸ್ಥಾನಗಳಿಗೆ ತೃಪ್ತಿಪಟ್ಟಿದೆ. ಈ ಬಾರಿ ಆಪ್ (AAP) ಗೆದ್ದುಕೊಂಡ 22 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳು ಮುಸ್ಲಿಂ ಮತ್ತು ದಲಿತ ಪ್ರಾಬಲ್ಯದ ಕ್ಷೇತ್ರಗಳಾಗಿದೆ. ಈ ಬಾರಿ ರಾಷ್ಟ್ರ ರಾಜಧಾನಿಯಲ್ಲಿ ಆಡಳಿತರೂಢ ಆಪ್ ಪಕ್ಷಕ್ಕೆ ದೊಡ್ಡ ಹಿನ್ನಡೆ ಉಂಟಾದರೂ, ದಲಿತ ಮತ್ತು ಮುಸ್ಲಿಂ ಸಮುದಾಯಗಳು ಮತ್ತೊಮ್ಮೆ ಆಪ್ ಕೈ ಹಿಡಿದುಕೊಂಡಿದೆ ಎಂಬುವುದು ಅಂಕಿ- ಅಂಶಗಳಿಂದ ಬಯಲಾಗಿದೆ.
ʼಇಂಡಿಯಾ ಟುಡೇ (Indiatoday)ʼ ನಡೆಸಿದ ವಿಶ್ಲೇಷಣೆಯ ಪ್ರಕಾರ, ಸಾಂಪ್ರದಾಯಿಕವಾಗಿ ಆಪ್ ಪರವಾಗಿರುವ 19 ಕ್ಷೇತ್ರಗಳ ಪೈಕಿ 2025ರ ಚುನಾವಣೆಯಲ್ಲಿ ಆಪ್ ಪಕ್ಷವು 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಆಪ್ ಪಕ್ಷವು ಗೆದ್ದುಕೊಂಡ ಈ 14 ಕ್ಷೇತ್ರಗಳಲ್ಲಿ 75% ಮತವನ್ನು ಪಡೆದುಕೊಂಡಿದೆ. 2020ರ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಆಪ್ ಪಕ್ಷವು ಶೇ. 100ರಷ್ಟು ಮತವನ್ನು ಪಡೆದುಕೊಂಡಿತ್ತು. ಆದರೆ ಈ ಬಾರಿ ಫಲಿತಾಂಶದಲ್ಲಿ ಕುಸಿತವಾದರೂ, ಮತಗಳಿಕೆಯಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ.
ಆಪ್ ಕೈ ಹಿಡಿದ ಮುಸ್ಲಿಂ, ದಲಿತ ಸುಮುದಾಯ
ಆಪ್ ದಲಿತ ಮತ್ತು ಮುಸ್ಲಿಂ ಪ್ರಾಬಲ್ಯದ 19 ಕ್ಷೇತ್ರಗಳಲ್ಲಿ ಈ ಬಾರಿ 14 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆದರೆ ಈ ಕ್ಷೇತ್ರಗಳಲ್ಲಿ ಕಳೆದ 2020ರ ಚುನಾವಣೆಗೆ ಹೋಲಿಕೆ ಮಾಡಿದಾಗ ಮತ ಹಂಚಿಕೆಯಲ್ಲಿ ಕುಸಿತ ಕಂಡಿದೆ. ಹಲವಾರು ಪರಿಶಿಷ್ಟ ಜಾತಿ (ಎಸ್ಸಿ)-ಮೀಸಲು ಕ್ಷೇತ್ರಗಳಲ್ಲಿ ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಆಪ್ ಪಕ್ಷದ ಮತ ಹಂಚಿಕೆ ಶೇ. 15 ರಿಂದ 20 %ಕ್ಕೆ ಕುಸಿತ ಕಂಡಿದೆ. ಇದರ ಪರಿಣಾಮವಾಗಿ ನಾಲ್ಕು ಎಸ್ಸಿ-ಮೀಸಲು ಕ್ಷೇತ್ರಗಳು ಆಪ್ ಗೆ ನಷ್ಟವಾಗಿದೆ.
2015 ಮತ್ತು 2020ರ ವಿಧಾನಸಭಾ ಚುನಾವಣೆಗಳಲ್ಲಿ ದಿಲ್ಲಿಯ ದಲಿತ ಪ್ರಾಬಲ್ಯದ 12 ಕ್ಷೇತ್ರಗಳು ಅಂದರೆ ಎಲ್ಲಾ ಕ್ಷೇತ್ರಗಳನ್ನು ಆಪ್ ಪಕ್ಷವು ಗೆದ್ದುಕೊಂಡಿದೆ. ಈ ಬಾರಿ ಆಪ್ 7 ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ 6 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ ಮತ್ತು ಎಐಎಂಐಎಂ ಪಕ್ಷಗಳ ಎದುರು ಶೇಕಡಾ 6- 22ರಷ್ಟು ಮತಗಳನ್ನು ಕಳೆದುಕೊಂಡಿದೆ.
ಈ ಬಾರಿಯೂ ಆಪ್ ಎಸ್ಸಿ ಮೀಸಲು ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿತು. ಆದರೆ, ಎಲ್ಲಾ 12 ಸ್ಥಾನಗಳಲ್ಲಿ, ಅದು ಬಿಜೆಪಿ ಮತ್ತು ಕಾಂಗ್ರೆಸ್ ಎದುರು ತನ್ನ ಮತಗಳಿಕೆ ಪಾಲನ್ನು ಕಳೆದುಕೊಂಡಿದೆ. 2020ರಲ್ಲಿ ಈಶಾನ್ಯ ದಿಲ್ಲಿಯ ಸೀಮಾಪುರಿ ಕ್ಷೇತ್ರದಲ್ಲಿ ಆಪ್ 65.8% ಮತಗಳನ್ನು ಗಳಿಸಿತ್ತು. 2025ರಲ್ಲಿ ಈ ಮತಗಳಿಕೆಯು 48.4% ಕ್ಕೆ ಕುಸಿದಿದೆ. ಆದರೂ ಆ ಕ್ಷೇತ್ರವನ್ನು ಗೆಲ್ಲುವಲ್ಲಿ ಆಪ್ ಯಶಸ್ವಿಯಾಗಿದೆ.
ಕರೋಲ್ ಬಾಗ್ ನಲ್ಲಿ 2020ರ ಚುನಾವಣೆಯಲ್ಲಿ 62.2% ಮತವನ್ನು ಆಪ್ ಪಕ್ಷವು ಗಳಿಸಿತ್ತು. ಈ ಬಾರಿ ಈ ಅಂಕಿ-ಅಂಶವು 50.8%ಕ್ಕೆ ಕುಸಿದಿದೆ. ಪಟೇಲ್ ನಗರದಲ್ಲಿ 2020ರಲ್ಲಿ 60.8% ಮತಗಳನ್ನು ಗಳಿಸಿದ್ದ ಆಪ್ ಪಕ್ಷವು 2025ರಲ್ಲಿ ಅಂಕಿ-ಅಂಶವು 49%ಕ್ಕೆ ಕುಸಿತ ಕಂಡಿದೆ. ಬವಾನಾ, ಮದೀಪುರ, ಮಂಗೋಲ್ಪುರಿ ಮತ್ತು ತ್ರಿಲೋಕ್ ಪುರಿಯಲ್ಲಿ ಎಎಪಿಗೆ ದೊಡ್ಡ ಮಟ್ಟದಲ್ಲಿ ಹಿನ್ನಡೆಯಾಗಿದೆ.
ಬವಾನಾದಲ್ಲಿ ಎಎಪಿಯ ಮತ ಹಂಚಿಕೆ 48.4% ದಿಂದ ಶೇ.38.3ಕ್ಕೆ ಇಳಿದಿದೆ. ಈ ಕ್ಷೇತ್ರದಲ್ಲಿ ಆಪ್ ಕಳೆದುಕೊಂಡ ಬಹುತೇಕ ಎಲ್ಲಾ ಮತಗಳು ಬಿಜೆಪಿಗೆ ವರ್ಗಾವಣೆಯಾಗಿವೆ. ಮಂಗೋಲ್ ಪುರಿಯಲ್ಲಿ ಆಪ್ ಮತಗಳಿಕೆಯಲ್ಲಿ ಶೇ.13ರಷ್ಟು ಕುಸಿತ ಕಂಡರೆ, ಬಿಜೆಪಿ ಶೇ.16 ರಷ್ಟು ಹೆಚ್ಚಾಗಿ ಮತವನ್ನು ಪಡೆದುಕೊಂಡಿದೆ. ಇದರಿಂದಾಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜ್ ಕುಮಾರ್ ಚೌಹಾಣ್ ಗೆಲುವು ಸಾಧಿಸಿದ್ದಾರೆ.
ತ್ರಿಲೋಕಪುರಿ ಕ್ಷೇತ್ರದಲ್ಲಿ ಎಎಪಿ ಮತ ಹಂಚಿಕೆ ಶೇ.6ರಷ್ಟು ಕುಸಿದಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಶೇ.3ರಷ್ಟು ಹೆಚ್ಚಿನ ಮತಗಳನ್ನು ಪಡೆದುಕೊಂಡಿದೆ. ಮದೀಪುರ ಕ್ಷೇತ್ರದಲ್ಲಿ ಆಪ್ ಮತ ಹಂಚಿಕೆ 2020ರಲ್ಲಿ ಶೇ.56ರಿಂದ ಈ ಬಾರಿ ಶೇ.36ಕ್ಕೆ ಇಳಿದಿದೆ. ಈ ಮತಗಳು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಾನವಾಗಿ ಹಂಚಿಕೆಯಾಗಿದೆ. ಇದರ ಪರಿಣಾಮವಾಗಿ ಕೇಸರಿ ಪಕ್ಷವು ಕ್ಷೇತ್ರದಲ್ಲಿ ನಿರ್ಣಾಯಕ ಗೆಲುವು ಸಾಧಿಸಿದೆ. ಗಮನಾರ್ಹವಾಗಿ ಈ ಕ್ಷೇತ್ರಗಳಲ್ಲಿ ಬಿಜೆಪಿ ಲಾಭವನ್ನು ಪಡೆದುಕೊಂಡಿದೆ. 12 ಎಸ್ಸಿ-ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶೇಕಡಾ 1-10% ಹೆಚ್ಚಿನ ಮತಗಳನ್ನು ಪಡೆದುಕೊಂಡಿದೆ.
ಮುಸ್ಲಿಂ ಮತ ಹಂಚಿಕೆ:
ದಿಲ್ಲಿಯಲ್ಲಿನ ಮುಸ್ಲಿಂ ಪ್ರಾಬಲ್ಯದ 7 ಸ್ಥಾನಗಳ ಫಲಿತಾಂಶಗಳನ್ನು ವಿಶ್ಲೇಷಣೆ ನಡೆಸಲಾಗಿದೆ. ಆಪ್ ಪಕ್ಷವು ಗಮನಾರ್ಹವಾಗಿ ಮುಸ್ಲಿಂ ಮತವನ್ನು ಪಡೆದುಕೊಂಡರೂ, ಮುಸ್ಲಿಂ ಪ್ರಾಬಲ್ಯದ ಕೆಲ ಕ್ಷೇತ್ರಗಳಲ್ಲಿ ಆಪ್ ಎದುರಾಳಿ ಅಭ್ಯರ್ಥಿಗಳಿಂದ ಸ್ಪರ್ಧೆಯನ್ನು ಎದುರಿಸಿದೆ. ದಿಲ್ಲಿಯ 7 ಮುಸ್ಲಿಂ ಪ್ರಾಬಲ್ಯದ ಸ್ಥಾನಗಳಲ್ಲಿ ಮುಸ್ತಫಾಬಾದ್ ಕ್ಷೇತ್ರ ಈ ಬಾರಿ ಬಿಜೆಪಿ ಪಾಲಾಗಿದೆ. ಆರು ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಆಪ್ ಯಶಸ್ವಿಯಾಗಿದೆ.
ಮುಸ್ತಫಾಬಾದ್ ನಲ್ಲಿ ಬಿಜೆಪಿಯ 42% ಮತಗಳನ್ನು ಪಡೆದುಕೊಂಡಿದೆ. ಈ ಕ್ಷೇತ್ರದಲ್ಲಿ ಆಪ್ 2020ರಲ್ಲಿ 53.2% ಮತಗಳನ್ನು ಪಡೆದಿತ್ತು. ಆದರೆ ಈ ಬಾರಿ ಆಪ್ ಮತ ಗಳಿಕೆ 33% ಕ್ಕೆ ಕುಸಿತವಾಗಿದೆ. ಉಳಿದ ಮುಸ್ಲಿಂ ಮತಗಳಲ್ಲಿ16.6% ಎಐಎಂಐಎಂ ಮತ್ತು 6 % ಮತ ಕಾಂಗ್ರೆಸ್ ಪಾಲಾಗಿದೆ. ಓಖ್ಲಾ ಕ್ಷೇತ್ರದಲ್ಲಿ ಆಪ್ ಮತಗಳಿಕ ಪಾಲು ಶೇಕಡಾ 24ರಷ್ಟು ಕುಸಿತವಾಗಿದೆ. ಈ ಕ್ಷೇತ್ರದಲ್ಲಿ ಆಪ್ ಅಭ್ಯರ್ಥಿ ಗೆಲುವನ್ನು ಕಂಡರೂ, 19% ಮತಗಳು ಎಐಎಂಐಎಂ ಮತ್ತು 4% ಮತಗಳು ಕಾಂಗ್ರೆಸ್ ಪಾಲಾಗಿದೆ. ಮತಿಯಾ ಮಹಲ್, ಬಲ್ಲಿಮಾರನ್ ಮತ್ತು ಚಾಂದನಿ ಚೌಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಮುಸ್ಲಿಂ ಮತಗಳ ಪಾಲು 6-11% ಹೆಚ್ಚಳ ಕಂಡಿದೆ. ಸೀಲಾಂಪುರದಲ್ಲಿ ಎಎಪಿಯ ಮತಗಳಲ್ಲಿ ಈ ಬಾರಿ 3% ಹೆಚ್ಚಳವಾಗಿದೆ.