ಉತ್ತರ ಪ್ರದೇಶ: ಇಬ್ಬರು ಮಕ್ಕಳ ಸಹಿತ ದಲಿತ ಕುಟುಂಬದ ನಾಲ್ವರ ಗುಂಡಿಕ್ಕಿ ಹತ್ಯೆ
Screengrab:X/@SachinGuptaUP
ಅಮೇಥಿ: ಸರ್ಕಾರಿ ಶಾಲೆಯ ಶಿಕ್ಷಕ, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಅಮೇಥಿಯಲ್ಲಿ ನಡೆದಿದೆ.
ಅಮೇಥಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಶಿಕ್ಷಕ ಸುನೀಲ್ (35), ಅವರ ಪತ್ನಿ ಪೂನಂ (32), ದೃಷ್ಟಿ (6) ಮತ್ತು ಅವರ ಒಂದು ವರ್ಷದ ಹೆಣ್ಣು ಮಗುವನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಸುನೀಲ್ ರಾಯ್ ಬರೇಲಿ ಮೂಲದವರಾಗಿದ್ದು, ಅಮೇಥಿಯ ಪನ್ಹೌನಾದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.
ಆರಂಭಿಕ ತನಿಖೆಯಲ್ಲಿ, ಪೂನಂ ಅವರು ಆ.18ರಂದು ರಾಯ್ ಬರೇಲಿಯಲ್ಲಿ ಚಂದನ್ ವರ್ಮಾ ಎಂಬಾತನ ವಿರುದ್ಧ ಎಸ್ಟಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ-1989ರ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದು ಕಂಡು ಬಂದಿದೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಏನಾದರೂ ಸಂಭವಿಸಿದರೆ ವರ್ಮಾ ಅವರೇ ಹೊಣೆಗಾರರು ಎಂದು ಪೂನಂ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ದೂರಿಗೂ, ಹತ್ಯೆ ಪ್ರಕರಣಕ್ಕೂ ಏನಾದರೂ ಸಂಬಂಧ ಇದೆಯಾ ಎಂದು ಇನ್ನೂ ಪತ್ತೆಯಾಗಿಲ್ಲ ಎಂದು ಅಮೇಥಿ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಕುಮಾರ್ ಸಿಂಗ್ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ನಿಶಾ ಅನಂತ್, ಎಸ್ಪಿ ಅನೂಪ್ ಸಿಂಗ್ ಮತ್ತು ಶಿಕ್ಷಣಾಧಿಕಾರಿಗಳು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಕುರಿತು ತನಿಖೆ ನಡೆಸಲು ಪೊಲೀಸರ ತಂಡಗಳನ್ನು ರಚಿಸಲಾಗಿದೆ. ತಂಡದಲ್ಲಿ ಸ್ಥಳೀಯ ಗುಪ್ತಚರ ವಿಭಾಗದ ಪೊಲೀಸರು ಕೂಡ ಇರಲಿದ್ದಾರೆ. ಆ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.