ಗೋವಾ: ದಲಿತ ಬಾಲಕಿಗೆ ಲೈಂಗಿಕ ಕಿರುಕುಳದ ಆರೋಪ; ಭುಗಿಲೆದ್ದ ಪ್ರತಿಭಟನೆ
Photo : indianexpress
ಪಣಜಿ: ಅಂಗಡಿಗೆ ಹೋಗುತ್ತಿದ್ದ ದಲಿತ ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪದ ಬಳಿಕ ಉತ್ತರ ಗೋವಾದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.
ಪ್ರಕರಣಕ್ಕೆ ಸಂಬಂಧಿಸಿ ಕ್ರಮ ತೆಗೆದುಕೊಳ್ಳುವುದರಲ್ಲಿ ಪೊಲೀಸರ ವಿಳಂಬ ಆರೋಪಿಸಿ ಹಾಗೂ ಆರೋಪಿಯನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಬಾಲಕಿಯ ಕುಟುಂಬಿಕರು ಹಾಗೂ ಸ್ಥಳೀಯ ನಿವಾಸಿಗಳು ಉತ್ತರ ಗೋವಾ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಬಾಲಕಿ ಸೋಮವಾರ ಅಂಗಡಿಗೆ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಮಂಗಳವಾರ ರಾತ್ರಿ ದಾಖಲಿಸಲಾದ ಎಫ್ಐಆರ್ ನಲ್ಲಿ ಇಲೆಕ್ಟ್ರಾನಿಕ್ಸ್ ಇಲಾಖೆಯ ಉದ್ಯೋಗಿಯಾಗಿರುವ ಆರೋಪಿ ಬಾಲಕಿಗೆ ಜಾತಿ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಬಾಲಕಿಯ ತಂದೆ ದಾಖಲಿಸಿದ ದೂರಿನಲ್ಲಿ ಬಾಲಕಿಯ ಲಂಗ ಹರಿಯಲಾಗಿದೆ. ಇದರಿಂದ ಆಕೆಯ ಘನತೆಗೆ ಧಕ್ಕೆ ಉಂಟಾಗಿದೆ. ಇದಲ್ಲದೆ, ಆತ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.
ತನಿಖೆಯ ವಿಳಂಬದ ಆರೋಪದ ಕುರಿತು ತನಿಖೆ ಆರಂಭಿಸಲಾಗಿದೆ. ಪ್ರಸ್ತುತ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಆತನನ್ನು ಸೆರೆ ಹಿಡಿಯಲು ತಂಡವನ್ನು ರೂಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.