ದಲಿತ ಮಹಿಳೆ ಮೇಲೆ ಹಲ್ಲೆ ನಡೆಸಿ, ವಿವಸ್ತ್ರಗೊಳಿಸಿ ರಾತ್ರಿಯಿಡೀ ಮರಕ್ಕೆ ಕಟ್ಟಿ ಹಾಕಿದ ದುಷ್ಕರ್ಮಿಗಳು
ಗಿರಿಧಿ: ವಿವಾಹೇತರ ಸಂಬಂಧವನ್ನು ಹೊಂದಿದ್ದ ಆರೋಪದಲ್ಲಿ 25ರ ಹರೆಯದ ದಲಿತ ಮಹಿಳೆಯೋರ್ವಳನ್ನು ಥಳಿಸಿ,ವಿವಸ್ತ್ರಗೊಳಿಸಿ ಬುಧವಾರ ರಾತ್ರಿಯಿಡೀ ಕಾಡಿನಲ್ಲಿ ಮರವೊಂದಕ್ಕೆ ಕಟ್ಟಿ ಹಾಕಿದ್ದ ಘಟನೆ ಜಾರ್ಖಂಡ್ನ ಗಿರಿಧಿ ಜಿಲ್ಲೆಯ ಕೋವಡಿಯಾ ಗ್ರಾಮದಲ್ಲಿ ನಡೆದಿದೆ.
ಮಾಹಿತಿಯ ಮೇರೆಗೆ ಗುರುವಾರ ಬೆಳಿಗ್ಗೆ ಏಳು ಗಂಟೆಯ ಸುಮಾರಿಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಅರೆನಗ್ನ ಸ್ಥಿತಿಯಲ್ಲಿ ನೀಲಗಿರಿ ಮರಕ್ಕೆ ಕಟ್ಟಿ ಹಾಕಲಾಗಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಆಘಾತಕ್ಕೊಳಗಾಗಿದ್ದ ವಿವಾಹಿತ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಧವಾರ ರಾತ್ರಿ 11 ಗಂಟೆಯ ಸುಮಾರಿಗೆ ವ್ಯಕ್ತಿಯೋರ್ವ ತನ್ನ ಮನೆಯ ಬಳಿ ಬಂದು ತನ್ನನ್ನು ಕರೆದಿದ್ದ. ತಾನು ಮನೆಯಿಂದ ಹೊರಬಂದಾಗ ಇಬ್ಬರು ವ್ಯಕ್ತಿಗಳು ತನ್ನನ್ನು ಬಲವಂತದಿಂದ ಬೈಕ್ ಮೇಲೆ ಕುಳ್ಳಿರಿಸಿಕೊಂಡು ಮನೆಯಿಂದ ಸುಮಾರು ಒಂದು ಕಿ.ಮೀ.ದೂರದ ಕಾಡಿಗೆ ಕರೆದೊಯ್ದಿದ್ದರು. ಅಲ್ಲಿ ಇಬ್ಬರು ಮಹಿಳೆಯರು ಕಾಯುತ್ತ ನಿಂತಿದ್ದರು. ಬಳಿಕ ಎಲ್ಲ ನಾಲ್ವರೂ ಸೇರಿಕೊಂಡು ತನ್ನ ಮೇಲೆ ಕೈಗಳಿಂದ ಹಲ್ಲೆ ನಡೆಸಿದ್ದರು, ತನ್ನ ಬಟ್ಟೆಗಳನ್ನು ಹರಿದು ಅದರಿಂದಲೇ ತನ್ನನ್ನು ನೀಲಗಿರಿ ಮರಕ್ಕೆ ಕಟ್ಟಿ ಹಾಕಿದ್ದರು ಎಂದು ಸಂತ್ರಸ್ತ ಮಹಿಳೆ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾಳೆ.
ಎಲ್ಲ ನಾಲ್ವರು ಆರೋಪಿಗಳು ಅದೇ ಗ್ರಾಮದವರಾಗಿದ್ದು ಮಹಿಳೆಗೆ ಪರಿಚಿತರೇ ಆಗಿದ್ದಾರೆ. ತಮ್ಮ ಅಪರಾಧವನ್ನು ಒಪ್ಪಿಕೊಂಡಿರುವ ಅವರು, ಮಹಿಳೆ 19ರ ಹರೆಯದ ತಮ್ಮ ಕುಟುಂಬದ ಸದಸ್ಯನೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದಳು ಎಂದು ಆರೋಪಿಸಿದ್ದಾರೆ. ಈ ಸಂಬಂಧವನ್ನು ಕೊನೆಗೊಳಿಸುವಂತೆ ಆರೋಪಿಗಳು ಇಬ್ಬರಿಗೂ ಬೆದರಿಕೆಯನ್ನೂ ಒಡ್ಡಿದ್ದರು. ಆದರೆ ಅವರು ಪರಸ್ಪರ ಭೇಟಿಯನ್ನು ಮುಂದುವರಿಸಿದ್ದರು ಮತ್ತು ಇದು ಮಹಿಳೆಗೆ ಪಾಠ ಕಲಿಸಲು ಅವರನ್ನು ಪ್ರೇರೇಪಿಸಿತ್ತು ಎಂದು ಪೊಲೀಸರು ತಿಳಿಸಿದರು. ಆರೋಪಿಗಳು ಒಬಿಸಿ ಸಮುದಾಯಕ್ಕೆ ಸೇರಿದ್ದು, ಅವರನ್ನು ವಿಕಾಸ ಸೋನಾರ್,ಆತನ ಪತ್ನಿಯರಾದ ರೇಖಾ ದೇವಿ ಮತ್ತು ಮುನ್ನಿ ದೇವಿ ಹಾಗೂ ಶ್ರವಣ ಕುಮಾರ ಎಂದು ಗುರುತಿಸಲಾಗಿದೆ.