ದಲಿತರು, ಓಬಿಸಿಗಳು, ಬುಡಕಟ್ಟು ಜನರು ಕೇಂದ್ರದ ಯೋಜನೆಗಳ ಅತಿ ದೊಡ್ಡ ಫಲಾನುಭವಿಗಳು: ಮೋದಿ
ನರೇಂದ್ರ ಮೋದಿ | Photo: PTI
ಹೊಸದಿಲ್ಲಿ : ದಲಿತರು, ಓಬಿಸಿಗಳು ಹಾಗೂ ಹಾಗೂ ಬುಡಕಟ್ಟು ಜನರು ತನ್ನ ಸರಕಾರದ ಬಡವರ ಪರ ಯೋಜನೆಗಳ ಅತಿ ದೊಡ್ಡ ಫಲಾನುಭವಿಗಳೆಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ. 25 ಕೋಟಿ ಜನರನ್ನು ಬಡತನದ ರೇಖೆಯಿಂದ ಹೊರತಂದಿರುವುದೇ ಕಳೆದ 10 ವರ್ಷಗಳಲ್ಲಿ ತನ್ನ ಸರಕಾರದ ಅತಿ ದೊಡ್ಡ ಸಾಧನೆಯಾಗಿದೆ ಎಂದವರು ತಿಳಿಸಿದ್ದಾರೆ.
‘ಪ್ರಧಾನಮಂತ್ರಿ ಅವಾಸ್ ಯೋಜನಾ’ದಡಿ ಗುಜರಾತ್ನಲ್ಲಿ 2,993 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ 1.30 ಲಕ್ಷ ಮನೆಗಳಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಬಡ ವ್ಯಕ್ತಿಯು ಸ್ವಂತ ಮನೆಯನ್ನು ಹೊಂದುವುದು, ಉತ್ತಮ ಭವಿಷ್ಯಕ್ಕೆ ನೀಡುವ ಖಾತರಿಯಾಗಿದೆ ಎಂದವರು ಹೇಳಿದರು.
‘‘ಗುಜರಾತ್ನಲ್ಲಿ 1.3 ಲಕ್ಷ ಮನೆಗಳ ನಿರ್ಮಾಣದ ಕುರಿತ ಅಂಕಿಅಂಶಗಳನ್ನು ನೋಡಿ ತಾನು ಬೆರಗಾಗಿದ್ದೇನೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮನೆಗಳನ್ನು ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದಕ್ಕಾಗಿ ಗುಜರಾತ್ ಸರಕಾರವನ್ನು ನಾನು ಅಭಿನಂದಿಸುತ್ತೇನೆ’ ಎಂದು ಮೋದಿ ಹೇಳಿದರು.
ಯುವಜನರು, ರೈತರು ಹಾಗೂ ಮಹಿಳೆಯರು ಅಭಿವೃದ್ಧಿಹೊಂದಿದ ಭಾರತದ ಆಧಾರಸ್ತಂಭಗಳೆಂದು ಮೋದಿ ಬಣ್ಣಿಸಿದರು.