ರಾಜಕೀಯಕ್ಕಾಗಿ ದಳಪತಿ ವಿಜಯ್ ಚಿತ್ರರಂಗ ತೊರೆಯಲಿದ್ದಾರೆಯೆ?; ನಟ ಹೇಳಿದ್ದೇನು?
ದಳಪತಿ ವಿಜಯ್ | PC : X \ @aswathofficial
ಚೆನ್ನೈ: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ಚಿತ್ರರಂಗ ತೊರೆಯುವ ತಮ್ಮ ನಿರ್ಧಾರವನ್ನು ವ್ಯಕ್ತಪಡಿಸಿದ್ದಾರೆ.
ರಾಜಕೀಯದಲ್ಲಿ ಮುಂದುವರಿಯಲು ಅವರು ಚಿತ್ರರಂಗ ತೊರೆಯುವುದು ನಿಶ್ಚಿತ ಎಂಬ ಮಾತುಗಳು ತಮಿಳು ಚಿತ್ರರಂಗದಲ್ಲಿ ಕೇಳಿ ಬರುತ್ತಿವೆ. ಹೀಗಾಗಿ ಅವರು ಉಳಿದಿರುವ ಕೆಲ ಸಿನಿಮಾಗಳನ್ನು ಪೂರ್ಣಗೊಳಿಸುವತ್ತ ತಮ್ಮ ಗಮನ ಹರಿಸಿದ್ದಾರೆ ಎನ್ನಲಾಗಿದೆ.
ರವಿವಾರ ನಡೆದ ಟಿವಿಕೆ ಪಕ್ಷದ ಭಾರಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ದಳಪತಿ ವಿಜಯ್, “ನಾನು ನನ್ನ ವೃತ್ತಿ ಜೀವನದ ಉತ್ತುಂಗದಲ್ಲಿರುವಾಗಲೇ ನನ್ನ ವೃತ್ತಿ ಜೀವನ ಮತ್ತು ವೇತನವನ್ನು ತೊರೆದಿದ್ದೇನೆ. ನಾನು ನಿಮ್ಮ ಮೇಲಿನ ನಂಬಿಕೆಯಿಂದ ಇಲ್ಲಿ ವಿಜಯ್ ಆಗಿ ನಿಂತಿದ್ದೇನೆ” ಎಂದು ಹೇಳಿದ್ದಾರೆ.
ಸೆಪ್ಟೆಂಬರ್ ತಿಂಗಳ ವರದಿಯ ಪ್ರಕಾರ, ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ದಳಪತಿ ವಿಜಯ್ ಆಗಿದ್ದಾರೆ. ತಮ್ಮ ಮುಂಬರುವ ಚಲನಚಿತ್ರ ‘ದಳಪತಿ 69’ಕ್ಕೆ ಅವರು 275 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವಿವಿಧ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.