ಡಬ್ಲ್ಯುಟಿಎ ಚಾರ್ಲ್ ಸ್ಟನ್ ಓಪನ್ ಡೇನಿಯಲ್ ಕಾಲಿನ್ಸ್ ಮಹಿಳಾ ಸಿಂಗಲ್ಸ್ ಚಾಂಪಿಯನ್
ಡೇನಿಯಲ್ ಕಾಲಿನ್ಸ್
ಹೊಸದಿಲ್ಲಿ: ಅಮೆರಿಕದ ಟೆನಿಸ್ ಆಟಗಾರ್ತಿ ಡೇನಿಯಲ್ ಕಾಲಿನ್ಸ್ ತನ್ನ ಶ್ರೇಷ್ಠ ಪ್ರದರ್ಶನವನ್ನು ಮುಂದುವರಿಸಿ ಡಬ್ಲ್ಯುಟಿಎ ಚಾರ್ಲ್ ಸ್ಟನ್ ಓಪನ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಕಾಲಿನ್ಸ್ ರಶ್ಯದ ಡರಿಯಾ ಕಸಟ್ಕಿನಾರನ್ನು 6-2, 6-1 ನೇರ ಸೆಟ್ ಗಳ ಅಂತರದಿಂದ ಮಣಿಸಿದರು. ಈ ಮೂಲಕ ಸತತ ಎರಡನೇ ಪ್ರಶಸ್ತಿಯನ್ನು ಜಯಿಸಿದರು. ಕಾಲಿನ್ಸ್ ವಾರದ ಹಿಂದೆ ಮಯಾಮಿ ಓಪನ್-1000 ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು. ಇದರೊಂದಿಗೆ ವಿಶ್ವ ರ್ಯಾಂಕಿಂಗ್ನಲ್ಲಿ 15ನೇ ಸ್ಥಾನ ತಲುಪಿ ಜೀವನಶ್ರೇಷ್ಠ ಸಾಧನೆ ಮಾಡಿದ್ದರು.
ಈ ಋತುವಿನ ಅಂತ್ಯಕ್ಕೆ ಟೆನಿಸ್ ನಿಂದ ನಿವೃತ್ತಿಯಾಗುವುದಾಗಿ ಪ್ರಕಟಿಸಿರುವ ಹೊರತಾಗಿಯೂ 30ರ ಹರೆಯದ ಕಾಲಿನ್ಸ್ ಜೀವನಶ್ರೇಷ್ಠ ಫಾರ್ಮ್ ನಲ್ಲಿದ್ದಾರೆ. ಸತತ 13 ಪಂದ್ಯಗಳಲ್ಲಿ ಜಯ ಸಾಧಿಸಿ ಗೆಲುವಿನ ಓಟ ಮುಂದುವರಿಸಿದ್ದಾರೆ.
2017ರ ಚಾರ್ಲ್ ಸ್ಟನ್ ಟ್ರೋಫಿ ವಿನ್ನರ್ ಕಸಟ್ಕಿನಾರನ್ನು ಫೈನಲ್ ನಲ್ಲಿ ಎದುರಿಸಿದ ಕಾಲಿನ್ಸ್ ಟೆನಿಸ್ ಅಂಗಣದಲ್ಲಿ ತನ್ನ ಪ್ರಾಬಲ್ಯ ಸಾಧಿಸಿ ಕೇವಲ 77 ನಿಮಿಷಗಳಲ್ಲಿ ಪಂದ್ಯವನ್ನು ಜಯಿಸಿದರು.
ಕಳೆದ ಎರಡು ಟೂರ್ನಮೆಂಟ್ ಗಳಲ್ಲಿ 28ರಲ್ಲಿ ಕೇವಲ 2 ಸೆಟ್ ಗಳನ್ನು ಕಳೆದುಕೊಂಡಿರುವ ಕಾಲಿನ್ಸ್ ಟೆನಿಸ್ ಅಂಗಳದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದಿದ್ದಾರೆ.
ಈ ಗೆಲುವಿನೊಂದಿಗೆ ಕಾಲಿನ್ಸ್ ಅವರು 2013ರ ನಂತರ ಒಂದೇ ವರ್ಷದಲ್ಲಿ ಮಯಾಮಿ ಹಾಗೂ ಚಾರ್ಲ್ ಸ್ಟನ್ ಪ್ರಶಸ್ತಿಗಳನ್ನು ಜಯಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡು ಎಲಿಟ್ ಕ್ಲಬ್ ಗೆ ಸೇರ್ಪಡೆಯಾದರು. 11 ವರ್ಷಗಳ ಹಿಂದೆ ಸೆರೆನಾ ವಿಲಿಯಮ್ಸ್ ಈ ಸಾಧನೆ ಮಾಡಿದ್ದರು.