ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆರೋಗ್ಯ ಸ್ಥಿತಿ ಗಂಭೀರ; ಆಸ್ಪತ್ರೆಗೆ ದಾಖಲು: ವರದಿ
ದಾವೂದ್ ಇಬ್ರಾಹಿಂ (File Photo: PTI)
ಇಸ್ಲಾಮಾಬಾದ್: ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಪಾಕಿಸ್ತಾನದ ಕರಾಚಿಯಲ್ಲಿ ಗಂಭೀರ ಆರೋಗ್ಯ ಸಮಸ್ಯೆಯ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು indiatoday.in ವರದಿ ಮಾಡಿದೆ.
ದಾವೂದ್ ಇಬ್ರಾಹಿಂಗೆ ವಿಷಪ್ರಾಷನ ಮಾಡಲಾಗಿದೆ ಎಂದು ವದಂತಿಗಳು ಹರಡಿವೆಯಾದರೂ ಈ ವಿಚಾರ ಇನ್ನೂ ದೃಢಪಟ್ಟಿಲ್ಲ.
ಎರಡು ದಿನಗಳ ಹಿಂದೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದ್ದು ಆತನನ್ನು ಬಿಗಿ ಭದ್ರತೆಯಲ್ಲಿರಿಸಲಾಗಿದೆ. ಆತನನ್ನು ಇರಿಸಲಾಗಿರುವ ಆಸ್ಪತ್ರೆಯ ಅಂತಸ್ತಿನಲ್ಲಿ ಬೇರೆ ಯಾವುದೇ ರೋಗಿಗಳನ್ನು ಇರಿಸಲಾಗಿಲ್ಲ ಎಂದು ಹೇಳಲಾಗಿದ್ದು ಆಸ್ಪತ್ರೆಯ ವೈದ್ಯರು ಮತ್ತು ಕುಟುಂಬ ವರ್ಗದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.
ದಾವೂದ್ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಆತನ ಸಂಬಂಧಿಕರಾದ ಸಾಜಿದ್ ವಾಗ್ಲೆ ಮತ್ತು ಆಲಿಶಾಹ್ ಪಾರ್ಕರ್ ಮೂಲಕ ಸಂಗ್ರಹಿಸಲು ಮುಂಬೈ ಪೊಲೀಸರು ಯತ್ನಿಸುತ್ತಿದ್ದಾರೆ.
ದಾವೂದ್ ಸೋದರಿ ಹಸೀನಾ ಪಾರ್ಕರ್ ಪುತ್ರ ಎನ್ಐಎಗೆ ಈ ವರ್ಷದ ಜನವರಿಯಲ್ಲಿ ನೀಡಿದ ಮಾಹಿತಿ ಪ್ರಕಾರ ದಾವೂದ್ ಎರಡನೇ ವಿವಾಹವಾದ ನಂತರ ಕರಾಚಿಯಲ್ಲಿ ವಾಸಿಸುತ್ತಿದ್ದಾನೆ.
ದಾವೂದ್ ಮತ್ತಾತನ ಪ್ರಮುಖ ಸಹಚರರು ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದ ಮೇಲೆ ನಿಯಂತ್ರಣ ಹೊಂದಿದ್ದಾರೆಂದು ದಾವೂದ್ ವಿರುದ್ಧ ಎನ್ಐಎ ಈ ಹಿಂದೆ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಹೇಳಿಕೊಳ್ಳಲಾಗಿದೆ.