ದೀಪಾವಳಿ ಹಿನ್ನೆಲೆ: ದೇಶದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ದಿಲ್ಲಿ, ಕೋಲ್ಕತ್ತಾ, ಮುಂಬೈ
Photo : PTI
ಹೊಸದಿಲ್ಲಿ: ದೀಪಾವಳಿ ಹಿನ್ನೆಲೆಯಲ್ಲಿ ಅನಿಯಂತ್ರಿತ ಪಟಾಕಿ ಸಿಡಿಸುವಿಕೆಯ ಬಳಿಕ ದಿಲ್ಲಿ, ಕೋಲ್ಕತಾ ಹಾಗೂ ಮುಂಬೈ ಸೋಮವಾರ ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.
ದಿಲ್ಲಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯುಐ) 420ರಷ್ಟಿದ್ದು, ಅಪಾಯಕಾರಿ ಮಟ್ಟದಲ್ಲಿದೆ ಎಂದು ಸ್ವಿಸ್ ಗ್ರೂಪ್ ಐಕ್ಯುಏರ್ ಸೋಮವಾರ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.
ಕೋಲ್ಕತ್ತಾದಲ್ಲಿ ಎಕ್ಯುಐ ಪ್ರಮಾಣ 196ರಷ್ಟಿದ್ದು, ನಾಲ್ಕನೇ ಸ್ಥಾನದಲ್ಲಿದೆ. ಮುಂಬೈಯಲ್ಲಿ ಎಕ್ಯುಐ ಪ್ರಮಾಣ 163ರಷ್ಟಿದ್ದು, 8ನೇ ಸ್ಥಾನದಲ್ಲಿದೆ ಎಂದು ಅದು ತಿಳಿಸಿದೆ.
ಎಕ್ಯುಐಯಲ್ಲಿ 400-500 ಮಟ್ಟ ಆರೋಗ್ಯವಂತ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಈಗಾಗಲೇ ಅನಾರೋಗ್ಯ ಇರುವವರಿಗೆ ಅಪಾಯ ಉಂಟು ಮಾಡುತ್ತದೆ. ಎಕ್ಯುಐಯಲ್ಲಿ 400-500 ಮಟ್ಟ ಹೃದಯ, ಶ್ವಾಸಕೋಶ ಹಾಗೂ ಅಸ್ತಮಾದ ಸಮಸ್ಯೆ ಇರುವವರಿಗೆ ತೊಂದರೆ ಉಂಟು ಮಾಡುತ್ತದೆ. ಎಕ್ಯುಐಯಲ್ಲಿ 0-50 ಮಟ್ಟ ಉತ್ತಮವೆಂದು ಪರಿಗಣಿಸಲಾಗಿದೆ.
ದಿಲ್ಲಿಯಲ್ಲಿ ಪ್ರತಿವರ್ಷ ದೀಪಾವಳಿ ಸಂದರ್ಭ ಪಟಾಕಿ ಸಿಡಿಸುವುದಕ್ಕೆ ಅಧಿಕಾರಿಗಳು ನಿಷೇಧ ಹೇರುತ್ತಾರೆ. ಆದರೆ, ಅದು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ವಾಹನಗಳ ಮಾಲಿನ್ಯ, ಕೈಗಾರಿಕೆಗಳು, ನಿರ್ಮಾಣ ಕಾಮಗಾರಿಯ ದೂಳು, ಕೃಷಿ ತ್ಯಾಜ್ಯ ಸುಡುವುದರಿಂದ ಸೃಷ್ಟಿಯಾಗುವ ಹೊಗೆಯಿಂದ ದೇಶದಲ್ಲಿ ಗಾಳಿಯ ಗುಣಮಟ್ಟ ಕುಸಿಯುತ್ತಿದೆ ಎಂದು ವರದಿ ಹೇಳಿದೆ.