ದಿಲ್ಲಿ ಕೋಚಿಂಗ್ ಸೆಂಟರ್ ನಲ್ಲಿ ಮೃತ್ಯು ಪ್ರಕರಣ | ತಳ ಅಂತಸ್ತು ಜಂಟಿ ಮಾಲಿಕರ ಜಾಮೀನು ಅರ್ಜಿ ವಿಲೇವಾರಿಗೊಳಿಸಿದ ನ್ಯಾಯಾಲಯ
PC : PTI
ಹೊಸದಿಲ್ಲಿ : ಇಲ್ಲಿಯ ಕೋಚಿಂಗ್ ಸೆಂಟರ್ ಸಾವುಗಳ ಪ್ರಕರಣವನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಶುಕ್ರವಾರ ಸಿಬಿಐಗೆ ಹಸ್ತಾಂತರಿಸಿರುವ ಹಿನ್ನೆಲೆಯಲ್ಲಿ ತಳಅಂತಸ್ತಿನ ನಾಲ್ವರು ಜಂಟಿ ಮಾಲಿಕರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಶನಿವಾರ ವಿಲೇವಾರಿಗೊಳಿಸಿತು. ಕಳೆದ ತಿಂಗಳು ಇಲ್ಲಿಯ ಹಳೆಯ ರಾಜಿಂದರ್ ನಗರದ ಕೋಚಿಂಗ್ ಸೆಂಟರ್ ನ ತಳ ಅಂತಸ್ತಿಗೆ ಮಳೆ ನೀರು ನುಗ್ಗಿ ಮೂವರು ಐಎಎಸ್ ಆಕಾಂಕ್ಷಿಗಳು ಮೃತಪಟ್ಟಿದ್ದರು.
ತಳಅಂತಸ್ತಿನ ಜಂಟಿ ಮಾಲಿಕರಾದ ಪರ್ವಿಂದರ್ ಸಿಂಗ್, ತಜಿಂದರ್ ಸಿಂಗ್, ಹರ್ವಿಂದರ್ ಸಿಂಗ್ ಮತ್ತು ಸರಬಜಿತ್ ಸಿಂಗ್ ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತಮಗೆ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಮೇಲ್ಮನವಿಯನ್ನು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಾಕೇಶ ಕುಮಾರ ಅವರು,ಆರೋಪಿಗಳು ಸೂಕ್ತ ನ್ಯಾಯಾಲಯಕ್ಕೆ ಅಥವಾ ಸಿಬಿಐ ನ್ಯಾಯಾಲಯಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಲು ಸ್ವತಂತ್ರರಿದ್ದಾರೆ ಎಂದು ತಿಳಿಸಿ ಮೇಲ್ಮನವಿಯನ್ನು ವಿಲೇವಾರಿಗೊಳಿಸಿದರು.
ನ್ಯಾಯಾಲಯದಿಂದ ಲಿಖಿತ ಆದೇಶವನ್ನು ಸ್ವೀಕರಿಸಿದ ಬಳಿಕ ಸಿಬಿಐ ನ್ಯಾಯಾಲಯಕ್ಕೆ ಹೊಸದಾಗಿ ಜಾಮೀನು ಅರ್ಜಿಯನ್ನು ಸಲ್ಲಿಸುವುದಾಗಿ ತಳಅಂತಸ್ತಿನ ಜಂಟಿ ಮಾಲಿಕರ ಪರ ವಕೀಲ ಅಮಿತ್ ಛಡ್ಡಾ ತಿಳಿಸಿದರು.