ಅದಾನಿ ಗ್ರೂಪ್ ಖರೀದಿಸಿದ ಕಂಪೆನಿಗಳ ಸಾಲ 'ಭಾರೀ ರಿಯಾಯಿತಿ'ಯಲ್ಲಿ ಇತ್ಯರ್ಥ : ಕಾಂಗ್ರೆಸ್ ಗಂಭೀರ ಆರೋಪ
Photo : PTI
ಹೊಸದಿಲ್ಲಿ : ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ (AIBEA) ಬಹಿರಂಗಪಡಿಸಿದ ಅಂಕಿ ಅಂಶಗಳ ಪ್ರಕಾರ ಅದಾನಿ ಗ್ರೂಪ್ ಸ್ವಾಧೀನಪಡಿಸಿಕೊಂಡ ನಂತರ 10 ಆರ್ಥಿಕವಾಗಿ ಸಂಕಷ್ಟಕ್ಕೀಡಾದ ಕಂಪನಿಗಳ ಬಾಕಿ ಪಾವತಿ ಮೇಲೆ 74% ಅಂದರೆ ಭಾರೀ ರಿಯಾಯಿತಿಯನ್ನು ಸಾರ್ವಜನಿಕ ವಲಯದ ಬ್ಯಾಂಕ್ ಗಳು ಮಾಡಿದೆ ಎಂದು ಅಂಕಿ-ಅಂಶಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಆರೋಪಿಸಿದೆ.
ಅದಾನಿ ಗ್ರೂಪ್ ಈ ಕಂಪೆನಿಗಳನ್ನು ಸ್ವಾಧೀನಪಡಿಸಿಕೊಂಡ ನಂತರ ಆರ್ಥಿಕ ಸಂಕಷ್ಟದಲ್ಲಿದ್ದ 10 ಕಂಪನಿಗಳ 62,000 ಕೋಟಿಯನ್ನು ಬ್ಯಾಂಕ್ ಗಳು ಕೇವಲ 16,000 ಕೋಟಿ ರೂ.ಗೆ ಇತ್ಯರ್ಥಪಡಿಸಿದೆ ಎಂದು AIBEA ದತ್ತಾಂಶವು ತೋರಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಅಂಕಿ-ಅಂಶಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಪೋಸ್ಟ್ ಮಾಡಿದ್ದು, 10 ಆರ್ಥಿಕವಾಗಿ ಸಂಕಷ್ಟಕ್ಕೊಳಗಾದ ಕಂಪೆನಿಗಳಿಂದ ಸುಮಾರು 62,000 ಕೋಟಿ ರೂ.ಗಳ ಬಾಕಿಯನ್ನು ಪಡೆಯಬೇಕಿದ್ದ ಸಾರ್ವಜನಿಕ ವಲಯದ ಬ್ಯಾಂಕುಗಳು ಜೈವಿಕವಲ್ಲದ ಪ್ರಧಾನಿಯ ನೆಚ್ಚಿನ ಅದಾನಿ ಸಮೂಹ ವಶಪಡಿಸಿಕೊಂಡ ನಂತರ ಕೇವಲ 16,000 ಕೋಟಿ ರೂ.ಗೆ ಹೇಗೆ ಇತ್ಯರ್ಥ ಮಾಡಿದೆ ಎಂದು ಪ್ರಶ್ನಿಸಿದ್ದಾರೆ.'
ಅದಾನಿ ಗ್ರೂಪ್ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್ ನಿರಂತರವಾಗಿ ವಾಗ್ದಾಳಿ ನಡೆಸುತ್ತಾ ಬಂದಿದೆ. ಅದಾನಿ ಗ್ರೂಪ್ ವಿರುದ್ಧ ಹಿಂಡೆನ್ಬರ್ಗ್ ರಿಸರ್ಚ್ ನ ಆರೋಪಗಳಿಗೆ ಸಂಬಂಧಿಸಿ ಜಂಟಿ ಸಂಸದೀಯ ಸಮಿತಿಯಿಂದ (ಜೆಪಿಸಿ) ತನಿಖೆಗೂ ಆಗ್ರಹಿಸಿದೆ.