ವಯನಾಡ್ ಭೂಕುಸಿತವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಿ : ರಾಹುಲ್ ಗಾಂಧಿ
ರಾಹುಲ್ ಗಾಂಧಿ (Photo: PTI)
ಹೊಸದಿಲ್ಲಿ : ಕೇರಳದ ವಯನಾಡ್ನಲ್ಲಿ ಸಂಭವಿಸಿದ ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಸರಕಾರವನ್ನು ಆಗ್ರಹಿಸಿದ್ದಾರೆ.
ಸಂಸತ್ ಕಲಾಪದ ಶೂನ್ಯ ವೇಳೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭೂಕುಸಿತ ಸಂತ್ರಸ್ತರಿಗೆ ಅತ್ಯಧಿಕ ಪರಿಹಾರ ನೀಡುವಂತೆ ಕೂಡ ಒತ್ತಾಯಿಸಿದ್ದಾರೆ.
ವಯನಾಡ್ ಭೂಕುಸಿತವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸುವ ಅಗತ್ಯತೆಯನ್ನು ಒತ್ತಿ ಹೇಳಿದ ರಾಹುಲ್ ಗಾಂಧಿ, ‘‘ನಾನು ಅದನ್ನು ಕಣ್ಣಾರೆ ಕಂಡಿದ್ದೇನೆ. ನಾನು ವಿಪತ್ತು ಸಂಭವಿಸಿದ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಕೆಲವು ಪ್ರಕರಣಗಳಲ್ಲಿ ಸಂಪೂರ್ಣ ಕುಟುಂಬವೇ ನಾಶವಾಗಿ, ಒಬ್ಬರೇ ಉಳಿದುಕೊಂಡಿದ್ದಾರೆ. ಕೆಲವೆಡೆ ವೃದ್ಧರು ಅಥವಾ ಮಕ್ಕಳು ಮಾತ್ರ ಉಳಿದುಕೊಂಡಿದ್ದಾರೆ’’ ಎಂದಿದ್ದಾರೆ.
ವಿಪತ್ತಿನ ಸಂದರ್ಭ ನೆರವು ನೀಡಿದವರಿಗೆ ಕೃತಜ್ಞತೆ ಸಲ್ಲಿಸಿರುವ ರಾಹುಲ್ ಗಾಂಧಿ, ‘‘200ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ. ಅಂತಿಮವಾಗಿ ಸಂತ್ರಸ್ತರಾದವರ ಸಂಖ್ಯೆ 400ಕ್ಕಿಂತಲೂ ಅಧಿಕವಾಗಿದೆ’’ ಎಂದರು.
ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವು ನೀಡಿದ ಕರ್ನಾಟಕ, ತಮಿಳುನಾಡು, ತೆಲಂಗಾಣ ಸರಕಾರಗಳು ಹಾಗೂ ಕೇಂದ್ರದ ಪಡೆ, ಸೇನೆಯ ಕೆಲಸವನ್ನು ಅವರು ಪ್ರಶಂಸಿಸಿದರು.
ಈ ಸಂದರ್ಭ ಸಮುದಾಯಗಳು ತೋರಿಸಿದ ಏಕತೆಯ ಬಗ್ಗೆ ರಾಹುಲ್ ಗಾಂಧಿ ಗಮನ ಸೆಳೆದರು. ವಿಭಿನ್ನ ಸಿದ್ಧಾಂತಗಳನ್ನು ಲೆಕ್ಕಿಸದೆ ಜನರ ನೆರವಿಗಾಗಿ ಎಲ್ಲಾ ಸಮುದಾಯಗಳು ಸಂಘಟಿತರಾಗಿರುವುದನ್ನು ನೋಡಲು ಸಂತೋಷವಾಗುತ್ತಿದೆ ಎಂದು ಅವರು ಹೇಳಿದರು.
ಇದು ಅತಿ ದೊಡ್ಡ ದುರಂತ ಎಂದು ಹೇಳಿದ ರಾಹುಲ್ ಗಾಂಧಿ, ಸಮಗ್ರ ಪುನರ್ವಸತಿ ಪ್ಯಾಕೇಜ್ ಒದಗಿಸುವಂತೆ, ವಿಪತ್ತು ನಿರೋಧಕ ಮೂಲಭೂತ ಸೌಕರ್ಯಗಳನ್ನು ನಿರ್ಮಾಣ ಮಾಡುವಂತೆ ಹಾಗೂ ಸಂತ್ರಸ್ತರ ಪರಿಹಾರವನ್ನು ಹೆಚ್ಚಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದರು.