ಲೋಕಸಭಾ ಚುನಾವಣೆಯಲ್ಲಿನ ಆಘಾತಕಾರಿ ಸೋಲಿನ ನಂತರ ಮಹಾಯುತಿ ಮೈತ್ರಿಕೂಟ ಪುಟಿದೆದ್ದಿದ್ದು ಹೇಗೆ?
Image: X/@AjitPawarSpeaks
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಆ ಮೂಲಕ ಸಮೀಕ್ಷೆಗಳನ್ನೆಲ್ಲ ತಲೆಕೆಳಗು ಮಾಡಿರುವ ಬಿಜೆಪಿ, ತನ್ನ ನಾಜೂಕು ಮತ್ತು ಬಹು ಆಯಾಮದ ಪ್ರಚಾರದ ಕಾರ್ಯತಂತ್ರದಿಂದ ಭಾರಿ ಯಶಸ್ಸು ಗಳಿಸಿದೆ. ಲೋಕಸಭಾ ಚುನಾವಣೆಯಲ್ಲಿನ ಆಘಾತಕಾರಿ ಪರಾಭವದ ನಂತರ ಪುಟಿದೆದ್ದಿರುವ ಬಿಜೆಪಿ, ತಾನಗೀಗಲೂ ಇರುವ ಮೈಕೊಡವಿ ಮೇಲೇಳಬಲ್ಲ ಸಾಮರ್ಥ್ಯವನ್ನು ಸಾಬೀತು ಪಡಿಸಿದೆ.
ಈ ವರ್ಷಾರಂಭದಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳ ಪೈಕಿ ವಿರೋಧ ಪಕ್ಷಗಳ ಮಹಾವಿಕಾಸ್ ಅಘಾಡಿ ಮೈತ್ರಿಕೂಟ 29 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಮತ್ತೊಂದೆಡೆ ಬಿಜೆಪಿ, ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್ಸಿಪಿಯನ್ನು ಹೊಂದಿರುವ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ಕೇವಲ 17 ಸ್ಥಾನಗಳಲ್ಲಿ ಗೆಲುವು ಸಾಧಿಸಲಷ್ಟೆ ಸಾಧ್ಯವಾಗಿತ್ತು. ಆ ಮೂಲಕ 45 ಸ್ಥಾನಗಳಲ್ಲಿ ಗೆಲ್ಲುವ ಗುರಿಯಿಂದ ಗಮನಾರ್ಹ ಹಿನ್ನಡೆ ಅನುಭವಿಸಿತ್ತು.
ಶನಿವಾರ ಪ್ರಕಟವಾದ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ 288 ಸ್ಥಾನಗಳ ಪೈಕಿ 230 ಸ್ಥಾನಗಳಲ್ಲಿ ಜಯಭೇರಿ ಬಾರಿಸಿರುವ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ, ಮತ್ತೆ ಅಧಿಕಾರಕ್ಕೆ ಮರಳಿದೆ. ಇದೇ ವೇಳೆ, ವಿರೋಧ ಪಕ್ಷಗಳ ಮಹಾವಿಕಾಸ್ ಅಘಾಡಿ ಮೈತ್ರಿಕೂಟ ಕೇವಲ 46 ಸ್ಥಾನಗಳಿಗಷ್ಟೆ ಸೀಮಿತವಾಗಿದೆ.
ರಾಜಕೀಯ ವೈವಿಧ್ಯತೆ ಹೊಂದಿರುವ ಭಾರತದ ರಾಜ್ಯಗಳ ಪೈಕಿ ಮಹತ್ವದ ರಾಜ್ಯವಾಗಿರುವ ಮಹಾರಾಷ್ಟ್ರವು ಬಹು ಆಯಾಮದ ಧೋರಣೆಯನ್ನು ಅಪೇಕ್ಷಿಸುತ್ತದೆ. ಬಿಜೆಪಿ ಪ್ರಚಾರ ತಂತ್ರವು ಒಗ್ಗಟ್ಟಾದ ರಾಜಕೀಯ ಮೈತ್ರಿ, ಸಾಮಾಜಿಕ ತಲುಪುವಿಕೆ, ಸಂಘಟನಾತ್ಮಕ ಮೂಲಸೌಕರ್ಯ ಹಾಗೂ ವಿಷಯಾಧಾರಿತ ಗಮನ ಕೇಂದ್ರೀಕರಿಸಿದ್ದರಿಂದ ಯಶಸ್ಸನ್ನು ಖಾತರಿ ಪಡಿಸಿಕೊಂಡಿದೆ.
1. ವ್ಯೂಹಾತ್ಮಕ ಮೈತ್ರಿಕೂಟ
• ಶಿವಸೇನೆ ವಿಭಜನೆ (2019): ಕಾಂಗ್ರೆಸ್ ಮತ್ತು ಎನ್ಸಿಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರವನ್ನು ವಿರೋಧಿಸಿ 2019ರಲ್ಲಿ ನಡೆದ ಶಿವಸೇನೆ ವಿಭಜನೆಯ ಸಂದರ್ಭದಲ್ಲೇ ಈ ಜಯಭೇರಿಗೆ ಬೀಜ ಬಿತ್ತಲಾಗಿತ್ತು. ಈ ವಿಭಜನೆಯ ಹಿಂದೆಯಿದ್ದ ಬಿಜೆಪಿ, ಈ ವಿಭಜನೆಯನ್ನು ತಾನು ಮಾತ್ರ ಸ್ಥಿರ ಮತ್ತು ನಿರ್ಣಾಯಕ ಪರ್ಯಾಯವಾಗಬಲ್ಲೆ ಎಂಬುದಕ್ಕೆ ಬಳಸಿಕೊಂಡಿತ್ತು. ಆ ಮೂಲಕ ಅತೃಪ್ತ ಶಿವಸೇನೆ ಕಾರ್ಯಕರ್ತರು ಹಾಗೂ ಶಿವಸೇನೆಯ ನಿಷ್ಠ ಮತದಾರರನ್ನು ತನ್ನತ್ತ ಸೆಳೆದಿತ್ತು.
• ಪ್ರಾದೇಶಿಕ ಮೈತ್ರಿ: ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದಂತಹ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ವೈವಿಧ್ಯಮಯ ಸಾಮಾಜಿಕ ಗುಂಪುಗಳು, ನಿರ್ದಿಷ್ಟವಾಗಿ ದಲಿತರು, ಇತರೆ ಹಿಂದುಳಿದ ವರ್ಗಗಳು ಹಾಗೂ ಮರಾಠರ ನಡುವೆ ಪ್ರಬಲವಾದ ಹಿಡಿತ ಸಾಧಿಸಿತು.
2. ಹಿಂದುತ್ವ ಮತ್ತು ಜಾತಿ ಐಕ್ಯತೆ: ಬಿಜೆಪಿಯ ಭಾರಿ ಯಶಸ್ಸಿನಲ್ಲಿ ಹಿಂದುತ್ವದ ಸಂದೇಶ ಕೇಂದ್ರ ಪಾತ್ರ ವಹಿಸಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಾಲ್ತಿಗೆ ತಂದ ‘ಬಟೇಂಗೆ ತೊ ಕಟೇಂಗೆ’ ಘೋಷಣೆಯು ಇಡೀ ಚುನಾವಣಾ ಪ್ರಚಾರದುದ್ದಕ್ಕೂ ಮಾರ್ದನಿಸಿತು. ನಂತರ, ಪ್ರಧಾನಿ ನರೇಂದ್ರ ಮೋದಿ ಕೂಡಾ “ಏಕ್ ಹೈ ತೊ ಸೇಫ್ ಹೈ’ ಎಂಬ ಘೋಷಣೆ ಮೂಲಕ ಯೋಗಿ ಆದಿತ್ಯನಾಥರ ಘೋಷಣೆಯನ್ನು ಸಮರ್ಥಿಸಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಾನಿಯುಂಟು ಮಾಡಿದ್ದ ಜಾತಿ ಆಧಾರಿತ ವಿಭಜನೆಯನ್ನು ಪರಿಹರಿಸಲು ಈ ಕಾರ್ಯತಂತ್ರವನ್ನು ಅನುಸರಿಸಲಾಗಿತ್ತು. ಹಿಂದೂಗಳಲ್ಲಿ ಒಗ್ಗಟ್ಟಿಗೆ ಕರೆ ನೀಡುವ ಮೂಲಕ ಬಿಜೆಪಿಯು ಸುಭದ್ರ ಮತ ಬ್ಯಾಂಕ್ ಅನ್ನು ನಿರ್ಮಿಸಿಕೊಂಡಿತು. ಬಿಜೆಪಿಯ ರಾಮಮಂದಿರ ಕುರಿತ ತನ್ನ ಬದ್ಧತೆ, ಗೋರಕ್ಷಣೆ ಹಾಗೂ ಸಾಂಸ್ಕೃತಿಕ ರಾಷ್ಟ್ರೀಯತೆ ಸೇರಿದಂತೆ ಹಿಂದುತ್ವ ನಿರೂಪಣೆಯು ಗ್ರಾಮೀಣ ಮತ್ತು ಅರೆ ಪಟ್ಟಣಗಳಲ್ಲಿ ಪ್ರಬಲವಾಗಿ ಪ್ರತಿಧ್ವನಿಸಿತು.
3. ಮರಾಠ ಮತ್ತು ಇತರೆ ಹಿಂದುಳಿದ ವರ್ಗಗಳ ಮತದಾರರ ಕ್ರೋಡೀಕರಣ
• ಮರಾಠ ಮೀಸಲಾತಿ ಹೋರಾಟದ ಪ್ರಮುಖ ನಾಯಕರಾದ ಮನೋಜ್ ಜಾರಂಗೆಯಂಥವರು ತನಗೆ ಸವಾಲೊಡ್ಡಿದರೂ, ಮರಾಠರ ಬೆಂಬಲ ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಮರಾಠ ಮೀಸಲಾತಿ ಪರವಾದ ತನ್ನ ನಿಲುವಿನಿಂದ, ಈ ಹಿಂದಿನ ಕಾಂಗ್ರೆಸ್-ಎನ್ಸಿಪಿ ಸರಕಾರಗಳ ಮೀನಾಮೇಷಕ್ಕಿಂತ ಬಿಜೆಪಿಯೇ ಕ್ರಿಯಾಶೀಲ ಹಾಗೂ ಸ್ಪಂದನಾತ್ಮಕ ಎಂಬ ಭಾವನೆಯನ್ನು ಮರಾಠರಲ್ಲಿ ಮೂಡಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
• ಒಬಿಸಿಗಳ ಮನವೊಲಿಕೆ: ಗುರಿಯಾಗಿಸಿಕೊಂಡ ಪ್ರಚಾರಗಳು, ನಾಯಕತ್ವದ ಪ್ರಾತಿನಿಧ್ಯ ಹಾಗೂ ಪ್ರಾಂತ್ಯಾಧಾರಿತ ಉಪಕ್ರಮಗಳಿಂದ ಕಾಂಗ್ರೆಸ್-ಎನ್ಸಿಪಿ(ಎಸ್ಪಿ)ಯ ಸಾಂಪ್ರದಾಯಿಕ ಮತಗಳನ್ನು ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ಇವುಗಳೊಂದಿಗೆ, ಅಭಿವೃದ್ಧಿ ಮತ್ತು ಆಡಳಿತದತ್ತ ಗಮನ, ಮಹಿಳಾ ಮತದಾರರ ಸಬಲೀಕರಣ, ಮೋದಿ ವರ್ಚಸ್ಸು, ಭ್ರಷ್ಟಾಚಾರವಿರೋಧಿ ನಿರೂಪಣೆ, ತಳಮಟ್ಟದ ಸಂಘಟನೆ ಹಾಗೂ ಆರೆಸ್ಸೆಸ್ ಬೆಂಬಲ, ಯೋಜನಾಬದ್ಧ ಸಾಮುದಾಯಿಕ ತಲುಪುವಿಕೆ ಹಾಗೂ ಆಂತರಿಕ ಜಗಳಗಳನ್ನು ನಿರ್ವಹಿಸುವಲ್ಲಿನ ಯಶಸ್ಸು ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ಮಹಾ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
4. ಅಭಿವೃದ್ಧಿ ಮತ್ತು ಆಡಳಿತದತ್ತ ಗಮನ:
ಭಾರತದ ಆರ್ಥಿಕ ರಾಜಧಾನಿಯಾಗಿರುವ ಮಹಾರಾಷ್ಟ್ರದಲ್ಲಿ ಅಭಿವೃದ್ಧಿ ಬಯಕೆಗಳು ಪ್ರಮುಖ ಸಂಗತಿಯಾಗಿವೆ. ಏಕನಾಥ್ ಶಿಂದೆ, ದೇವೇಂದ್ರ ಫಡ್ನವಿಸ್ ಹಾಗೂ ಅಜಿತ್ ಪವಾರ್ ಸೇರಿದಂತೆ ಬಿಜೆಪಿ ನಾಯಕರು ಮೂಲಸೌಕರ್ಯ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ಸುಧಾರಿತ ಸಾರ್ವಜನಿಕ ಸೇವೆಗಳಿಗೆ ಹೆಚ್ಚು ಒತ್ತು ನೀಡಿದರು.
5.ಮಹಿಳಾ ಮತದಾರರ ಸಬಲೀಕರಣ:
ಮಹಿಳಾ ಮತದಾರರನ್ನು ಬಿಜೆಪಿಯತ್ತ ಕ್ರೋಡೀಕರಿಸುವಲ್ಲಿ ಲಡ್ಕಿ ಬಹಿನ್ ಯೋಜನೆ ಮಹತ್ವದ ಪಾತ್ರ ವಹಿಸಿದ್ದು, ಪ್ರಾಂತೀಯವಾಗಿ ಬಿಜೆಪಿ ಗಳಿಸಿರುವ ಯಶಸ್ಸಿನಲ್ಲಿ ಕೇಂದ್ರ ಪಾತ್ರ ನಿರ್ವಹಿಸಿದೆ.
6. ಮೋದಿ ವರ್ಚಸ್ಸು:
ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯತೆ ಅಬಾಧಿತವಾಗಿ ಉಳಿಯಿತು. ನಿರ್ಣಾಯಕ ಹಾಗೂ ಸ್ಥಿರ ನಾಯಕ ಎಂದು ಬಣ್ಣನೆಗೊಳಗಾಗಿರುವ ಪ್ರಧಾನಿ ನರೇಂದ್ರ ಮೋದಿಯ ಉಪಸ್ಥಿತಿಯು ನಗರ ಮತ್ತು ಅರೆ ಪಟ್ಟಣಗಳ ಮತದಾರರನ್ನು ಒಗ್ಗೂಡಿಸಿತು. ಅಲ್ಲದೆ, ಸಾಂಪ್ರದಾಯಿಕ ನಿರೂಪಣೆಗಳನ್ನು ಮುರಿಯಲು ಸಾಮಾಜಿಕ ಮಾಧ್ಯಮಗಳ ಮೊರೆ ಹೋದ ಬಿಜೆಪಿ, ಪರಿಣಾಮಕಾರಿಯಾಗಿ ಕಾರ್ಯಸೂಚಿಗಳನ್ನು ನಿಗದಿಪಡಿಸಿತು ಹಾಗೂ ವಿರೋಧ ಪಕ್ಷಗಳ ದಾಳಿಗೆ ಪ್ರತ್ಯುತ್ತರ ನೀಡಿತು.
7. ಭ್ರಷ್ಟಾಚಾರ ವಿರೋಧಿ ನಿರೂಪಣೆ:
ಕಾಂಗ್ರೆಸ್-ಎನ್ಸಿಪಿ ಮೈತ್ರಿಕೂಟದ ಭ್ರಷ್ಟಾಚಾರ ಮತ್ತು ಅದಕ್ಷತೆ ದಾಖಲೆಯನ್ನು ಬಿಜೆಪಿ ನಿರಂತರವಾಗಿ ತನ್ನ ಪ್ರಚಾರ ಸಭೆಗಳಲ್ಲಿ ಎತ್ತಿ ತೋರಿಸಿತು. ನಿರ್ದಿಷ್ಟವಾಗಿ ಪಾರದರ್ಶಕ ಆಡಳಿತ ಬಯಸುವ ನಗರ ಮತದಾರರನ್ನು ಗುರಿಯಾಗಿಸಿಕೊಂಡು. ಈ ನಿರೂಪಣೆಯು ಬಿಜೆಪಿ ಸ್ಥಿರತೆ ವರ್ಚಸ್ಸಿನೊಂದಿಗೆ ಸೇರಿಕೊಂಡು ಸಾರ್ವಜನಿಕ ಅಭಿಪ್ರಾಯಗಳನ್ನು ಗಮನಾರ್ಹವಾಗಿ ಮಾರ್ಪಡಿಸಿತು.
8. ತಳಮಟ್ಟದ ಸಂಘಟನೆ ಹಾಗೂ ಆರೆಸ್ಸೆಸ್ ಬೆಂಬಲ:
ಅಮಿತ್ ಶಾ ನೇತೃತ್ವದ ತಳಮಟ್ಟದ ಸಂಘಟನೆ ನಿರ್ಣಾಯಕ ಪಾತ್ರ ವಹಿಸಿತು. ಮಹಾಯುತಿ ಮೈತ್ರಿಕೂಟದಲ್ಲಿ ಪ್ರಬಲವಾದ ತಿಕ್ಕಾಟಗಳಿದ್ದರೂ, ಪ್ರಮುಖ ಗುಂಪು ಸಭೆಗಳು ಹಾಗೂ ತಳಮಟ್ಟದ ಕಾರ್ಯತಂತ್ರಗಳು ಬಲಿಷ್ಠ ಅನುಷ್ಠಾನವನ್ನು ಖಾತರಿ ಪಡಿಸಿದವು. ಇದರೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಕೂಡಾ ಸಕ್ರಿಯ ಪಾತ್ರ ವಹಿಸಿತು.
9. ಯೋಜನಾಬದ್ಧ ಸಾಮುದಾಯಿಕ ಮನವೊಲಿಕೆ:
ಬಿಜೆಪಿಯು ನಿರ್ದಿಷ್ಟ ಸಮುದಾಯಗಳನ್ನು ಆ ಸಮುದಾಯದ ನಾಯಕರಿಂದಲೇ ಸಮಾವೇಶ ನಡೆಸುವ ಮೂಲಕ ಗುರಿಯಾಗಿಸಿಕೊಂಡಿತು. ಉದಾಹರಣೆಗೆ, ಬಂಗಾಳಿ ಬಾಹುಳ್ಯದ ಪ್ರದೇಶಗಳಲ್ಲಿ ಬಂಗಾಳಿ ನಾಯಕರು ಪ್ರಚಾರ ನಡೆಸಿದರೆ, ಯಾದವ ಸಮುದಾಯ ಪ್ರಾಬಲ್ಯ ಹೊಂದಿರುವ ಪ್ರದೇಶಗಳಲ್ಲಿ ಯಾದವ ನಾಯಕರು ಪ್ರಚಾರ ನಡೆಸಿದರು. ಈ ವೈಯಕ್ತೀಕರಿಸಿದ ಪ್ರಚಾರ ತಂತ್ರವು ಬಿಜೆಪಿಗೆ ವೈವಿಧ್ಯಮಯ ಮತದಾರರ ಗುಂಪುಗಳೊಂದಿಗೆ ಸಂಪರ್ಕ ಸಾಧಿಸಲು ನೆರವು ಒದಗಿಸಿತು.
10. ಆಂತರಿಕ ಕಲಹದ ನಿರ್ವಹಣೆ:
ದೇವೇಂದ್ರ ಫಡ್ನವಿಸ್, ಏಕನಾಥ್ ಶಿಂದೆ ಹಾಗೂ ಅಜಿತ್ ಪವಾರ್ ರಂತಹ ನಾಯಕರನ್ನು ಸರಿದೂಗಿಸುವುದು ಸಾಮಾನ್ಯ ಕೆಲಸವಲ್ಲ. ಆದರೆ, ವೈಯಕ್ತಿಕ ಮಹತ್ವಾಕಾಂಕ್ಷೆಗಳು ಹಿನ್ನೆಲೆಗೆ ಸರಿಯುವುದನ್ನು ಬಿಜೆಪಿ ನಾಯಕತ್ವವು ಖಾತರಿಗೊಳಿಸಿತು ಹಾಗೂ ಮಹಾರಾಷ್ಟ್ರ ಚುನಾವಣೆ ಗೆಲ್ಲವುದರತ್ತ ಮಾತ್ರ ಗಮನ ಕೇಂದ್ರೀಕರಿಸಿತು.
ಇವುಗಳೊಂದಿಗೆ, ಅಭಿವೃದ್ಧಿ ಮತ್ತು ಆಡಳಿತದತ್ತ ಗಮನ, ಮಹಿಳಾ ಮತದಾರರ ಸಬಲೀಕರಣ, ಮೋದಿ ವರ್ಚಸ್ಸು, ಭ್ರಷ್ಟಾಚಾರ ವಿರೋಧಿ ನಿರೂಪಣೆ, ತಳಮಟ್ಟದ ಸಂಘಟನೆ ಹಾಗೂ ಆರೆಸ್ಸೆಸ್ ಬೆಂಬಲ, ಯೋಜನಾಬದ್ಧ ಸಾಮುದಾಯಿಕ ತಲುಪುವಿಕೆ ಹಾಗೂ ಆಂತರಿಕ ಜಗಳಗಳನ್ನು ನಿರ್ವಹಿಸುವಲ್ಲಿನ ಯಶಸ್ಸು ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ಮಹಾ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸೌಜನ್ಯ: indiatoday.in