́ಡೀಪ್ ಫೇಕ್ ́ಹಿನ್ನೆಲೆ: ಐಟಿ ಕಾಯ್ದೆ ಪಾಲಿಸುವಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸೂಚಿಸಿದ ಕೇಂದ್ರ ಸರ್ಕಾರ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕೃತಕ ಬುದ್ಧಿಮತ್ತೆ ಚಾಲಿತ ತಪ್ಪು ಮಾಹಿತಿಗಳು ಹರಡುತ್ತಿರುವ ಕುರಿತು ಕಳವಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಅನುಗುಣವಾಗಿ ಕಾರ್ಯನಿರ್ವಹಿಸುವಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಮಂಗಳವಾರ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂದು scroll.in ವರದಿ ಮಾಡಿದೆ.
ಯಾವುದೇ ವ್ಯಕ್ತಿ ತಾನು ಹೇಳಿರದ ಅಥವಾ ಮಾಡಿರದ ಕೃತ್ಯಗಳನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು, ಅದೇ ವ್ಯಕ್ತಿಯೇ ಹೇಳಿದಂತೆ ಅಥವಾ ಮಾಡಿದಂತೆ ಆಡಿಯೊ ಅಥವಾ ವಿಡಿಯೊವನ್ನು ಸೃಷ್ಟಿಸುವುದು ಡೀಪ್ ಫೇಕ್ ತಂತ್ರಜ್ಞಾನವಾಗಿದೆ. ಈ ತಂತ್ರಜ್ಞಾನವು ಎಷ್ಟು ಸಾಧ್ಯವೊ ಅಷ್ಟು, ನೈಜವಾಗಿ ಕಾಣುವಂತೆ ಮಾಡುತ್ತವೆ. ಆ ತುಣುಕುಗಳನ್ನು ದುರುದ್ದೇಶದಿಂದ ಸೃಷ್ಟಿಸಲಾಗಿರುತ್ತದೆ.
ಕೇಂದ್ರ ಸರ್ಕಾರ ನೀಡಿರುವ ಸಲಹಾ ಸೂಚಿಯಂತೆ, “ಮಾಹಿತಿ ತಂತ್ರಜ್ಞಾನದ ಅಡಿಯಲ್ಲಿ ಅನುಮತಿಸಲಾಗದ ತುಣುಕುಗಳು, ನಿರ್ದಿಷ್ಟವಾಗಿ ನಿಯಮ 3(1)(ಬಿ) ಅಡಿ ಪಟ್ಟಿ ಮಾಡಿರುವ ತುಣುಕುಗಳ ಕುರಿತು ಸೇವಾ ಹಾಗೂ ಬಳಕೆದಾರರ ಕರಾರಿನನ್ವಯ ಸ್ಪಷ್ಟ ಹಾಗೂ ದೃಢವಾದ ಧ್ವನಿಯಲ್ಲಿ ಬಳಕೆದಾರರಿಗೆ ಮಾಹಿತಿ ನೀಡಬೇಕು” ಎಂದು ಸೂಚಿಸಲಾಗಿದೆ.
ನಿಯಮ 3(1)(ಬಿ)ಯು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ತಮ್ಮ ನಿಯಮಗಳು, ನಿರ್ಬಂಧಗಳು, ಖಾಸಗಿತನ ನೀತಿ ಹಾಗೂ ಬಳಕೆದಾರರ ಕರಾರರನ್ನು ಬಳಕೆದಾರರು ಬಯಸುವ ಭಾಷೆಯಲ್ಲಿ ಒದಗಿಸುವುದನ್ನು ಕಡ್ಡಾಯಗೊಳಿಸಿದೆ. ನಿಯಮ 3(1)(ಬಿ)(ವಿ)ವು ತಪ್ಪು ಮಾಹಿತಿ ಹರಡುವಿಕೆಯನ್ನು ನಿರ್ದಾಕ್ಷಿಣ್ಯವಾಗಿ ನಿಷೇಧಿಸುತ್ತದೆ.
“ತಪ್ಪು ಮಾಹಿತಿಯು ಅಂತರ್ಜಾಲ ಬಳಕೆದಾರರ ಸುರಕ್ಷತೆ ಹಾಗೂ ವಿಶ್ವಾಸಕ್ಕೆ ಆಳವಾದ ಅಪಾಯವನ್ನುಂಟು ಮಾಡುತ್ತದೆ” ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. “ಕೃತಕ ಬುದ್ಧಿಮತ್ತೆ ಚಾಲಿತ ಡೀಪ್ ಫೇಕ್ ತಪ್ಪು ಮಾಹಿತಿಯಾಗಿದ್ದು, ಡಿಜಿಟಲ್ ಬಳಕೆದಾರರ ಸುರಕ್ಷತೆ ಹಾಗೂ ವಿಶ್ವಾಸಕ್ಕೆ ಮತ್ತಷ್ಟು ವೇಗವಾದ ಅಪಾಯ ಒಡ್ಡುತ್ತದೆ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಅಂತಹ ಪ್ರಕರಣಗಳಲ್ಲಿ ಬಳಕೆದಾರರಿಗೆ ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಇನ್ನಿತರ ಕಾನೂನುಗಳ ಕುರಿತು ಬಳಕೆದಾರರಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳು ಅರಿವು ಮೂಡಿಸಬೇಕು ಎಂದೂ ಸಲಹಾ ಸೂಚಿಯಲ್ಲಿ ನಿರ್ದೇಶಿಸಲಾಗಿದೆ.